ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

Public TV
3 Min Read
AI Image
AI Image

ಮುಂಬೈ: ರೈಲು ಬರಲು ತಡವಾದ ಹಿನ್ನೆಲೆ ನಿಗದಿ ಪಡಿಸಿದ ಮೂಹೂರ್ತದಲ್ಲಿ ಮಂಟಪಕ್ಕೆ ತಲುಪಬೇಕಿದ್ದ ವರನನ್ನು ರೈಲ್ವೆ ಇಲಾಖೆ (Railway Department) ಸರಿಯಾದ ಸಮಯಕ್ಕೆ ತಲುಪಿಸಿರುವ ಘಟನೆ ನಡೆದಿದೆ.

ಮುಂಬೈ (Mumbai) ಮೂಲದ ವರ ಚಂದ್ರಶೇಖರ್ ವಾಘ್ ಹಾಗೂ ಅವರ ಕುಟುಂಬಸ್ಥರು ಗುವಾಹಟಿಯಲ್ಲಿ (Guwahati) ನಿಗದಿಯಾಗಿದ್ದ ಮದುವೆಗಾಗಿ ಮುಂಬೈನ ಕಲ್ಯಾಣ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಮುಂಬೈನಿಂದ ಗುವಾಹಟಿಗೆ ಹೊರಟಿದ್ದ ಗೀತಾಂಜಲಿ ಎಕ್ಸಪ್ರೆಸ್‌ (Geetanjali Express) ಪಶ್ಚಿಮ ಬಂಗಾಳದ (West Bengal) ಹೌರಾ ಬಳಿ ಇರುವ ಸಾಂತರಗಾಭಿ ನಿಲ್ದಾಣಕ್ಕೆ 4 ಗಂಟೆ ತಡವಾಗಿ ತಲುಪಿದೆ.ಇದನ್ನೂ ಓದಿ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

ಇದರಿಂದ ಆತಂಕಗೊಂಡ ವರ ಕೂಡಲೇ ತನ್ನ ಎಕ್ಸ್ (X) ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರೈಲ್ವೇ ಇಲಾಖೆಗೆ ಮನವಿ ಮಾಡಿಕೊಂಡಿದ್ದು, ಕೂಡಲೇ ಇಲಾಖೆ ಆತನ ಮನವಿಗೆ ಸ್ಪಂದಿಸಿ, ಮುಹೂರ್ತದ ಸಮಯಕ್ಕೆ ಸರಿಯಾಗಿ ಮಂಟಪಕ್ಕೆ ತಲುಪುವಂತೆ ಸಹಾಯ ಮಾಡಿದೆ.

ಘಟನೆ ಏನು?
ನ.14ರಂದು ಚಂದ್ರಶೇಖರ್ ವಾಘ 35 ಜನ ಕುಟುಂಬಸ್ಥರೊಂದಿಗೆ ಮುಂಬೈನ ಕಲ್ಯಾಣ ನಿಲ್ದಾಣದಿಂದ (Kalyan Railway Station) ಗುವಾಹಟಿಗೆ ಹೋಗಬೇಕಿತ್ತು. ಕಲ್ಯಾಣ ರೈಲು ನಿಲ್ದಾಣದಿಂದ ಬೆಳಿಗ್ಗೆ 6:55ಕ್ಕೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹತ್ತಿ, ನ.15ರ ಮಧ್ಯಾಹ್ನ 1:05ಕ್ಕೆ ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ (Howrah Juntion) ತಲುಪಬೇಕಿತ್ತು. ಅಲ್ಲಿಂದ ಸಂಜೆ 4.05ಕ್ಕೆ ಇರುವ ಸರೈಘಾಟ್ ಎಕ್ಸಪ್ರೆಸ್‌ ರೈಲು ಹತ್ತಿ ಗುವಾಹಟಿ ತಲುಪುವ ಯೋಜನೆ ಅವರದಾಗಿತ್ತು. ಆದರೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹೌರಾ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿರುವ ಸಾಂತರಗಾಛಿ ರೈಲು ನಿಲ್ದಾಣಕ್ಕೆ ತಲುಪಬೇಕಾಗಿದ್ದ ಸಮಯಕ್ಕಿಂತ 4 ಗಂಟೆ ತಡವಾಗಿ ಬಂದಿತ್ತು. ಇದರಿಂದ ವಿಚಲಿತರಾದ ವರ ಕೂಡಲೇ `ಎಕ್ಸ್’ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ನೆರವು ನೀಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಗೀತಾಂಜಲಿ ಎಕ್ಸ್ಪ್ರೆಸ್ ರೈಲು ಬರುವವರೆಗೂ ಸರೈಘಾಟ್ ಎಕ್ಸಪ್ರೆಸ್‌ ರೈಲನ್ನು ಹೌರಾ ಜಂಕ್ಷನ್‌ನಲ್ಲಿಯೇ ನಿಲ್ಲಿಸಿದರು. ಲೋಕೊ ಪೈಲಟ್ ಗೀತಾಂಜಲಿ ಎಕ್ಸಪ್ರೆಸ್‌ ರೈಲಿನ ವೇಗವನ್ನು ಹೆಚ್ಚಿಸಿದರು.

ರೈಲು ತಲುಪಿದ ತಕ್ಷಣ ರೈಲ್ವೆ ಸಿಬ್ಬಂದಿಗಳು ತಕ್ಷಣವೇ ವರನ ಕುಟುಂಬ ಮತ್ತು ಅವರ ಬ್ಯಾಗುಗಳನ್ನು ಇನ್ನೊಂದು ಪ್ಲಾಟ್‌ಫಾರ್ಮ್ಗೆ ಸಾಗಿಸಲು ನೆರವಾದರು. ವಯೋವೃದ್ಧರಿಗಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ರೈಲು ಸಂಜೆ 4:08 ನಿಮಿಷಕ್ಕೆ ಹೌರಾ ನಿಲ್ದಾಣ ತಲುಪಿತು. ಸರೈಘಾಟ್ ಎಕ್ಸಪ್ರೆಸ್‌ ಸಂಜೆ 4.19ಕ್ಕೆ ಹೊರಟು ಶನಿವಾರ ಬೆಳಿಗ್ಗೆ 10.05ಕ್ಕೆ ಸರಿಯಾಗಿ ಗುವಾಹಟಿ ತಲುಪಿತು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಸರಿಯಾಗಿ ಸಮಯಕ್ಕೆ ತಲುಪಲು ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಸಹಾಯ ಮಾಡಿದ ರೈಲ್ವೆ ಇಲಾಖೆ ಹಾಗೂ ಅಧಿಕಾರಿಗಳಿಗೆ ಚಂದ್ರಶೇಖರ್ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಪಿಡಿಓ ಪ್ರಶ್ನೆ ಪತ್ರಿಕೆ ಸೋರಿಕೆ? – ರಾಯಚೂರಿನಲ್ಲಿ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Share This Article