ಬೆಂಗಳೂರು: ರಾಜಧಾನಿಯ ಕಂಠೀರವ ಸ್ಟುಡಿಯೋ ಮುಂಭಾಗ ಹಾಗೂ ಡಾ. ರಾಜ್‌ಕುಮಾರ್ ಪುಣ್ಯಭೂಮಿ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ವೇಳೆ ಭೀಕರ ದುರಂತವೊಂದು ಸಂಭವಿಸಿದೆ.
ಅಂಡರ್‌ಪಾಸ್ ನಿರ್ಮಾಣಕ್ಕಾಗಿ ತೋಡಲಾಗಿದ್ದ ಬೃಹತ್ ಗುಂಡಿಯ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು ಹಲವು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಅಂಡರ್‌ಪಾಸ್ ಕಾಮಗಾರಿಗಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣನ್ನು ತೋಡಲಾಗಿತ್ತು. ಇಂದು ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾಗ ಮೇಲಿಂದ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿ ಉಸಿರಾಡಲಾಗದೆ ನರಳಾಡಿದ್ದಾರೆ.
ಸದ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಓರ್ವ ಕಾರ್ಮಿಕ ಮಣ್ಣಿನ ಅಡಿಯಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣಿನಡಿಯಲ್ಲಿ ಇನ್ನು ಯಾರಾದರೂ ಸಿಲುಕಿದ್ದಾರೆಯೇ ಎಂಬ ಶಂಕೆಯ ಮೇಲೆ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

