ಬೆಳಗಾವಿ: ನಿರಂತರ ಮಳೆಯಿಂದ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಗೆ (Ghataprabha River) 13 ಜನರಿದ್ದ ಟ್ರಾಕ್ಟರ್ (Tractor) ಮಗುಚಿ ಬಿದ್ದ ಪರಿಣಾಮ ಓರ್ವ ನಾಪತ್ತೆ ಆಗಿದ್ದು, 12 ಮಂದಿ ಬಚಾವ್ ಆದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ (Rain) ಸುರಿಯುತ್ತಿದ್ದು, ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿತ್ತು. ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಂದಗಾಂವ್ ಬಳಿಯ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್ ಜಲಾವೃತವಾಗಿತ್ತು. ನದಿ ದಾಟುವ ಸಂದರ್ಭ 13 ಜನರಿದ್ದ ಟ್ರಾಕ್ಟರ್ ಟ್ರೈಲರ್ ಸಮೇತ ನೀರಿಗೆ ಬಿದ್ದಿದೆ. ಇದನ್ನೂ ಓದಿ: ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್
ಅದೃಷ್ಟವಷಾತ್ 12 ಮಂದಿ ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಣ್ಮರೆಯಾದವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಟ್ರಾಕ್ಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರು ಅವರಾದಿಯಿಂದ ನಂದಗಾಂವ್‌ಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬ್ರಿಡ್ಜ್ ದಾಟುವಾಗ ಆಯತಪ್ಪಿ ಘಟಪ್ರಭಾ ನದಿಗೆ ಟ್ರಾಕ್ಟರ್ ಬಿದ್ದಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇನ್ನು 5 ದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ

