ರಾಮನಗರ: ಹೊಸ ವರುಷ, ಹೊಸ ಹರುಷ, ಹೊಸ ಹೊಸ ಪ್ಲಾನ್‍ಗಳು, ಹೇಗೆಲ್ಲಾ ಎಂಜಾಯ್ ಮಾಡಬೇಕು ಅಂದುಕೊಂಡಿದ್ದ ಪ್ರವಾಸಿಗರಿಗೆ, ಜಿಲ್ಲೆಯ ಜನರಿಗೆ ರಾಮನಗರ ಜಿಲ್ಲಾಡಳಿತ ಫುಲ್ ಶಾಕ್ ನೀಡಿದ್ದು, ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
ರಾಮನಗರ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31ರ ಸಾಯಂಕಾಲ 6ಗಂಟೆಯಿಂದ ಜನವರಿ 1ರ ಮಧ್ಯರಾತ್ರಿ 12 ಗಂಟೆಯ ತನಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನ ನಿಷೇಧಿಸಿದೆ. ಈ ಮೂಲಕ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷವನ್ನ ಎಂಜಾಯ್ ಮಾಡಲು ಪ್ಲಾನ್ ಹಾಕಿಕೊಂಡಿದ್ದ ಪ್ರವಾಸಿಗರಿಗೆ ಶಾಕ್ ನೀಡಿದೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಸಂಗಮ, ಮೇಕೆದಾಟು, ಕಾವೇರಿ ಫಿಶಿಂಗ್ ಕ್ಯಾಂಪ್, ಚುಂಚಿ ಫಾಲ್ಸ್, ಇಗ್ಗಲೂರು ಜಲಾಶಯದ ಹಿನ್ನೀರಿನ ಪ್ರದೇಶ, ಕಣ್ವಾ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗ ಬೆಟ್ಟ, ಶೋಲೆ ಖ್ಯಾತಿಯ ರಾಮದೇವರ ಬೆಟ್ಟ ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನ ನಿರ್ಬಂಧಿಸಲಾಗಿದೆ.
ಹೊಸ ವರುಷದ ಹುರುಪಿನಲ್ಲಿ ಪಿಕ್‍ನಿಕ್ ಸ್ಪಾಟ್‍ಗಳಿಗೆ ತೆರಳಿ ಸೆಲಬ್ರೇಷನ್ ಮಾಡುವುದು, ಫೈರಿಂಗ್ ಕ್ಯಾಂಪ್ ಮಾಡಿ ಕುಣಿದಾಡುವುದು. ಎಣ್ಣೆ ಕಿಕ್‍ನಲ್ಲಿ ನದಿಯ ನೀರಿಗೆ ಇಳಿದು ಮೈಮೇಲೆ ಅನಾಹುತಗಳನ್ನು ಎಳೆದುಕೊಂಡು ಪ್ರಾಣಹಾನಿ ತಪ್ಪಿಸುವ ದೃಷ್ಟಿಯಿಂದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.