ಭೂಮಿ ಮೇಲಿನ ಸ್ವರ್ಗ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿಷೇಧ

Public TV
1 Min Read
st marys island

ಉಡುಪಿ: ಪೂರ್ವ ಮುಂಗಾರು ಮಳೆ ಕರಾವಳಿಯಲ್ಲಿ ಅಬ್ಬರ ತೋರುತ್ತಿದೆ. ಅರಬ್ಬಿ ಸಮುದ್ರದ ಅಬ್ಬರ ಹೆಚ್ಚಾಗುತ್ತಿದ್ದಂತೆ ಉಡುಪಿ ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ ಸೇಂಟ್ ಮೇರಿಸ್ ದ್ವೀಪಕ್ಕೆ (St. Mary’s Islands) ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

st marys island 1

ಹೌದು. ಮುಂದಿನ 4 ತಿಂಗಳು ಯಾವುದೇ ಬೋಟುಗಳು, ದೋಣಿಗಳು ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗಲ್ಲ. ಬೇಸಿಗೆ ರಜೆ ಬಂದ್ರೆ ಸಾಕು ರಾಜ್ಯದ ಮೂಲೆ ಮೂಲೆಯಿಂದ ಜನ ಉಡುಪಿಗೆ (Udupi) ಪ್ರವಾಸಕ್ಕೆ ಬರುತ್ತಾರೆ. ಆದರೆ ಸಮುದ್ರದ ಅಲೆಗಳ ಜೊತೆಗೆ ಆಟವಾಡುವ ದ್ವೀಪದ ವಿಹಾರ ಮಾಡುವ ಆಸೆಗಳನ್ನು ಹೊತ್ತು ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ. ಇದನ್ನೂ ಓದಿ: ಇಂದು ಭಾರೀ ಮಳೆ ಸಾಧ್ಯತೆ- ಕೇರಳದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ದ್ವೀಪಕ್ಕೆ ಅಪ್ಪಳಿಸುತ್ತವೆ ಬೃಹತ್ ಗಾತ್ರದ ಅಲೆಗಳು: ಸೇಂಟ್ ಮೇರಿಸ್ ದ್ವೀಪ ವಿಭಿನ್ನ ಆಕಾರದ ಬಂಡೆಗಳಿಗೆ ಫೇಮಸ್. ಬಂಡೆಗಳ ಜೊತೆ ಫೋಟೋಶೂಟ್ ಮಾಡಲೆಂದೇ ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಉಡುಪಿಗೆ ಬಂದು ದ್ವೀಪದ ಕಡೆ ಯಾನ ಮಾಡುತ್ತಾರೆ. ಮಳೆಗಾಲದಲ್ಲಿ ಪಾಚಿ ಕಟ್ಟಿದ ಬಂಡೆಗಳು ಅಪಾಯಕಾರಿ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸವನ್ನು ನಿರ್ಬಂಧ ಮಾಡಲಾಗುತ್ತದೆ. ಸಮುದ್ರದ ಅಬ್ಬರ ಅಲೆಗಳ ಹೊಡೆತ ಹೆಚ್ಚಾಗಿರುವ ಕಾರಣ ಪ್ರವಾಸಿ ಬೋಟ್ ಗಳು ಸಮುದ್ರಕ್ಕೆ ಇಳಿಯುವುದು ಅಪಾಯಕಾರಿಯಾಗಿದೆ. 

st marys island 2

ದ್ವೀಪದಲ್ಲಿ ವಿವಿಧ ಬಗೆಯ ಮನರಂಜನಾ ಕ್ರೀಡೆಗಳನ್ನು ಕೂಡ ನಿಷೇಧ ಮಾಡಲಾಗಿದೆ. ಸೇಂಟ್‍ಮೇರಿಸ್ ಪಿಕ್ ಪಾಯಿಂಟ್‍ನಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ತಬ್ಧ ಆಗಿದೆ. ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾದ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ತರಹದ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಕರಾವಳಿ ಪ್ರವಾಸಕ್ಕೆ ಬರುವವರು ತೀರದಿಂದಲೇ ಸಮುದ್ರ ನೋಡಿ ವಾಪಸ್ಸಾಗುತ್ತಿದ್ದಾರೆ.

Share This Article