ಶ್ರೀನಗರ: ಪಹಲ್ಗಾಮ್ ದಾಳಿಯ ನಂತರ ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆ ತೀವ್ರಗೊಂಡಿದ್ದು ಜಮ್ಮು ಕಾಶ್ಮೀರದ (Jammu Kashmir) ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ (Lashkar-e-Taiba) ಟಾಪ್ ಕಮಾಂಡರ್‌ನನ್ನು (Top Commander) ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಅಲ್ತಾಫ್ ಲಲ್ಲಿ ಟಾಪ್ ಕಮಾಂಡರ್ ಆಗಿದ್ದು ಉಗ್ರ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ. ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ ಅಲ್ತಾಫ್ ಲಲ್ಲಿ ಹತ್ಯೆಯಾಗಿದ್ದಾನೆ. ಇದನ್ನೂ ಓದಿ: ಮಂಗಳೂರಲ್ಲಿ ಪಹಲ್ಗಾಮ್ ದಾಳಿ ಸಮರ್ಥಿಸಿಕೊಂಡ ದುಷ್ಟ – ಪೊಲೀಸರಿಂದ ಕಿಡಿಗೇಡಿಗಾಗಿ ಹುಡುಕಾಟ
ಈ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶ್ರೀನಗರಕ್ಕೆ ಇಂದು ಆಗಮಿಸಿದ್ದು ಅವರಿಗೆ ಕಾರ್ಯಾಚರಣೆಯ ವಿವರ ನೀಡಲಾಯಿತು.
ಗುರುವಾರ ಬಿಹಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಹಲ್ಗಾಮ್ ದಾಳಿ ಮಾಡಿದವರು ಮತ್ತು ದಾಳಿಯ ಹಿಂದೆ ಇರುವವರು ಊಹೆ ಮಾಡದ ರೀತಿ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ಗುಡುಗಿದ್ದರು.