ಬೃಂದಾ ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಂಕಾಗಿದ್ದಳು. ಆಫೀಸ್‌ಲ್ಲಿ, ಪಿಜಿಯಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ಅವಳ ಮುಖದಲ್ಲಿ ಮೊದಲಿದ್ದ ಖುಷಿ, ಸಂಭ್ರಮ ಕಾಣದೇ ಹಲವು ದಿನಗಳೇ ಕಳೆದಿದ್ದವು. ಇದನ್ನು ಗಮನಿಸಿದ್ದ ಪಿಜಿಯಲ್ಲಿದ್ದ ಅಕ್ಕಪಕ್ಕದ ರೂಮ್‌ನ ಹುಡುಗಿಯರು ಅವಳದ್ದೇನು ಕತೆ? ಲವ್ ಫೇಲ್ಯೂರ್ ಇರಬೇಕು ಅಂತೆಲ್ಲ ಮಾತಾಡಲು ಶುರು ಮಾಡಿದ್ದರು. ಇದನ್ನೆಲ್ಲ ಗಮನಿಸಿದ್ದ ಮಾತಿನ ಮಲ್ಲಿ ಸಂಜನಾ.. ಬೃಂದಾಳ ಬಳಿ ಬಂದು ಅವಳ ಸಮಸ್ಯೆ ಏನೆಂದು ವಿಚಾರಿಸಿಯೇ ಬಿಟ್ಟಿದ್ದಳು.
ಆಗ, ಯಾವ ಫೇಲ್ಯೂರ್ ಇಲ್ಲ. ಅವಳಿಗೆ ಏನೋ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ. ಅದನ್ನೇ ದೊಡ್ಡದಾಗಿ ಯೋಚಿಸಿ ಇಷ್ಟೆಲ್ಲ ಮಂಕಾಗಿದ್ದಾಳೆ ಅಂತ ಗೊತ್ತಾಗಿತ್ತು. ಇಷ್ಟಕ್ಕೆ ಬಿಡದೇ ಮಾತಿನ ಮಲ್ಲಿ ʻಇಷ್ಟೇನಾ? ನನ್ನ ಫ್ರೆಂಡ್‌ಗೂ ಹೀಗೆ ಆಗಿತ್ತು. ಒಬ್ಬರು ಡಾಕ್ಟರ್ ಇದಾರೆ ಅವರಿಗೆ ತೋರಿಸಿದ್ವಿ, ಈಗ ಅವಳಿಗೆ ಯಾವ ಸಮಸ್ಯೆಯೂ ಇಲ್ಲ. ನೀನು ನಾಳೆ ಸಂಜೆ ರೆಡಿ ಇರು, ಅಂತ ಆರ್ಡರ್ ಮಾಡಿ ಹೋಗ್ಬಿಟ್ಲು.
ಯಾರ ಬಳಿಯೂ ಹೇಳಿಕೊಳ್ಳಲಾಗದೇ ಪರದಾಡುತ್ತಿದ್ದ ಬೃಂದಾ ಆರಂಭದಲ್ಲಿ ಬೇಡ ನಿಮಗ್ಯಾಕೆ ತೊಂದರೆ ಅಂದ್ರೂ, ಸಂಜನಾಳ ಮಾತಿಗೆ ಒಪ್ಪಿ, ಹೂಂ ಅಂದಿದ್ದಳು. ಹೌದು ಬೃಂದಾಳ ಸಮಸ್ಯೆ ಏನು? ಯಾಕಷ್ಟು ಮಂಕಾಗಿದ್ದಳು? ವೈದ್ಯರು ಅವಳಿಗೆ ಕೊಟ್ಟ ಸಲಹೆ ಏನು? ಅದಾದ ಬಳಿಕ ಅವಳಲ್ಲಾದ ಬದಲಾವಣೆ ಏನು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಬೃಂದಾಳನ್ನ ಕಾಡಿದ್ದು ಕೈ, ಕಣ್ಣು, ಕತ್ತು, ತಲೆ ನೋವು, ನಿದ್ರಾಹೀನತೆ, ಇವುಗಳಿಂದ ಆಕೆ ಆತ್ಮವಿಶ್ವಾಸ, ಎಲ್ಲಾ ಕೆಲಸದಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಇದಕ್ಕೆಲ್ಲ ಕಾರಣ (Mobile Addiction) ಮೊಬೈಲ್ ಗೀಳು! ನಿಮ್ಮಲ್ಲೂ ಅನೇಕರಿಗೆ ಇಂತಹ ಸಮಸ್ಯೆ ಇರಬಹುದು, ಅಂತವರಿಗಾಗಿ ಇಲ್ಲೊಂದಿಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ.

ಫೋನ್ ಅತಿಯಾದ್ರೆ ಏನೆಲ್ಲಾ ತೊಂದ್ರೆ ಗೊತ್ತಾ?
ಇಂದಿನ ಜೀವನದಲ್ಲಿ ಸ್ಮಾರ್ಟ್‌ಫೋನ್ (Mobile Phone) ನಮ್ಮ ದಿನನಿತ್ಯದ ಅವಿಭಾಜ್ಯ ಭಾಗವೇ ಆಗಿಹೋಗಿದೆ. ಕರೆ, ಮೆಸೇಜ್, ಸಾಮಾಜಿಕ ಜಾಲತಾಣ, ವಿಡಿಯೋ, ಸುದ್ದಿ, ಎಲ್ಲವೂ ಬೆರಳ ತುದಿಯಲ್ಲೇ ಸಿಗುತ್ತದೆ. ದೀರ್ಘಕಾಲ ಹೀಗೆ ಮೊಬೈಲ್ ಬಳಕೆ ಕುತ್ತಿಗೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಎಷ್ಟೋ ಕಡೆ ಒಂಟಿಯಾಗಿ ವಾಸಿಸುವ ಜನ ತಮ್ಮ ಬೇಸರ ಕಳೆಯಲು ಹೀಗೆ ಮೊಬೈಲ್‌ಗೆ ಒಗ್ಗಿಕೊಂಡಿರುತ್ತಾರೆ. ಒಂಟಿಯಾಗಿರುವವರು ಅಂತಲ್ಲ ಈಗೀಗ ತುಂಬು ಕುಟುಂಬದಲ್ಲೂ ಮನುಷ್ಯ ಮನುಷ್ಯನ ಒಡನಾಟಕ್ಕಿಂತ ಮೊಬೈಲ್‌ಗೆ ಆದ್ಯತೆ ಹೆಚ್ಚಾಗಿದೆ. ರೀಲ್ಸ್ ನೋಡಲು ಗಂಟೆ ಗಂಟೆಗಳನ್ನೇ ಬಲಿಕೊಡ್ತಾರೆ..! ಇದು ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂತಹ ಆರೋಗ್ಯದ ಸಮಸ್ಯೆಗಳು ಯಾವುವು ನೋಡೋಣ.
ಫೋನ್ ಬಾಡಿ ಮಾರ್ಕರ್
ಮೊಬೈಲ್ ಬಳಕೆಯಿಂದ ಆಗುವ ದೈಹಿಕ ಬದಲಾವಣೆಗಳನ್ನು ಸಾಮಾನ್ಯವಾಗಿ ʻಫೋನ್ ಬಾಡಿ ಮಾರ್ಕರ್ʼ (Phone Body) ಎಂದು ಕರೆಯಲಾಗುತ್ತದೆ. ಇದು ವೈದ್ಯಕೀಯವಾಗಿ ನಿಖರವಾದ ಅಧಿಕೃತ ರೋಗದ ಹೆಸರು ಅಲ್ಲ.
ಟೆಕ್ ನೆಕ್: ಮೊಬೈಲ್‌ನ್ನು ನೋಡುತ್ತಿರುವಾಗ ಬಹುತೇಕ ಜನರು ತಲೆಯನ್ನು ಮುಂದಕ್ಕೆ ಬಾಗಿಸಿಕೊಂಡು, ಕುತ್ತಿಗೆಯನ್ನು ಕೆಳಕ್ಕೆ ತಗ್ಗಿಸುತ್ತಾರೆ. ಈ ರೀತಿಯ ಭಂಗಿಯನ್ನು ದೀರ್ಘಕಾಲ ಮುಂದುವರಿಸಿದಾಗ ಕುತ್ತಿಗೆಯ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಇದನ್ನು ಸಾಮಾನ್ಯವಾಗಿ ʻಟೆಕ್ ನೆಕ್ʼ (Tech Neck) ಎಂದು ಕರೆಯಲಾಗುತ್ತದೆ. ಇದರಿಂದ ಕತ್ತು ಹಾಗೂ ಕತ್ತಿನ ಚರ್ಮಕ್ಕೆ ತೊಂದರೆ ಉಂಟಾಗುತ್ತದೆ.
ಮನುಷ್ಯನ ತಲೆ ಸುಮಾರು 4 -5 ಕೆಜಿ ತೂಕ ಇರತ್ತೆ. ಅದನ್ನ ಕತ್ತು ಹೊತ್ತುಕೊಂಡಿರುತ್ತೆ. ಹೀಗೆ ಒಂದೇ ಭಂಗಿಯಲ್ಲಿ ಮೊಬೈಲ್ ನೋಡುತ್ತಾ ಕಳೆದು ಹೋದ್ರೆ ಕತ್ತು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಮೊಬೈಲ್ ನೋಡಲು ಕತ್ತನ್ನು ಬಗ್ಗಿಸುವುದರಿಂದ ಕತ್ತಿನ ಮೇಲೆ ಸುಮಾರು 22 ಕೆಜಿ ತೂಕದಷ್ಟು ಒತ್ತಡ ಉಂಟಾಗುತ್ತದೆ. ಇಂತಹ ಸಮಸ್ಯೆ ಮಧ್ಯಮ ವಯಸ್ಕರನ್ನು ಸಹ ಅವರ ವಯಸ್ಸಿಗಿಂತ ಎರಡರಷ್ಟು ವಯಸ್ಕರ ದೇಹದ ಸಮಸ್ಯೆಗಳಿಗೆ ಒಡ್ಡುತ್ತದೆ.

ಕೈ, ಬೆರಳುಗಳ ಮೇಲೆ ಪರಿಣಾಮ
ಫೋನ್ ಅನ್ನು ದೀರ್ಘಕಾಲ ಒಂದೇ ಕೈಯಲ್ಲಿ ಹಿಡಿದು ಟೈಪ್ ಮಾಡುವುದು ಅಥವಾ ಸ್ಕ್ರೋಲ್ ಮಾಡುವುದು ಕೈ, ಮಣಿಕಟ್ಟು ಮತ್ತು ಬೆರಳುಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ಇದರಿಂದ ಮಣಿಕಟ್ಟು ಅಥವಾ ಬೆರಳುಗಳಲ್ಲಿ ನೋವು ಉಂಟಾಗುತ್ತದೆ. ಭುಜಗಳಲ್ಲೂ ನೋವು ಕಾಣಿಸಿಕೊಳ್ಳಬಹುದು.
ಕಣ್ಣುಗಳ ಮೇಲೆ ಪರಿಣಾಮ
ಮೊಬೈಲ್ ಪರದೆಯನ್ನು ದೀರ್ಘಕಾಲ ನೋಡುತ್ತಿರುವುದರಿಂದ ಕಣ್ಣುಗಳಲ್ಲಿ ಆಯಾಸ, ಕಣ್ಣುಗಳ ಶುಷ್ಕವಾಗುವುದು, ತಾತ್ಕಾಲಿಕ ದೃಷ್ಟಿ ಅಸ್ಪಷ್ಟತೆ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಕಡಿಮೆ ಬೆಳಕಿನಲ್ಲಿ ನಿರಂತರವಾಗಿ ಸ್ಕ್ರೀನ್ ನೋಡುವುದು ಕಣ್ಣಿನ ಆಯಾಸವನ್ನು ಹೆಚ್ಚಿಸುತ್ತದೆ.
ಚರ್ಮದ ಮೇಲಾಗುವ ಪರಿಣಾಮ
ಫೋನ್ ಪರದೆಯನ್ನು ಮುಖಕ್ಕೆ ಹತ್ತಿರ ಇಟ್ಟು ದೀರ್ಘಕಾಲ ಮಾತನಾಡುವುದು ಅಥವಾ ಬಳಸುವುದು ಕೆಲವರಲ್ಲಿ ಚರ್ಮದ ಮೇಲೆ ತೈಲ, ಬೆವರು ಮತ್ತು ಧೂಳು ಸೇರಲು ಕಾರಣವಾಗಬಹುದು. ಇದರಿಂದ ಮೊಡವೆ ಅಥವಾ ಚರ್ಮದ ಕಿರಿಕಿರಿ ಹೆಚ್ಚಾಗಬಹುದು.
ನಿದ್ರಾಹೀನತೆ
ಅತಿಯಾದ ಸ್ಕ್ರೀನ್ ಬಳಕೆಯಿಂದ ಕಣ್ಣುಗಳಿಗೆ ತೀವ್ರ ಆಯಾಸವಾಗುತ್ತದೆ. ಅಲ್ಲದೇ ನಿದ್ರಾಹೀನತೆಯಂತಹ ಸಮಸ್ಯೆ ಗಳು ಎದುರಾಗುತ್ತದೆ. ಇದರಿಂದ ಮೆದುಳಿಗೂ ಸಹ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಫೋನ್ ಬಾಡಿ ಮಾರ್ಕರ್ ತಪ್ಪಿಸಲು ಏನು ಮಾಡಬೇಕು?
1. ಫೋನ್‌ನ್ನು ಕಣ್ಣಿನ ಮಟ್ಟಕ್ಕೆ ಹತ್ತಿರ ಇಡಿ: ತಲೆಯನ್ನು ನಿರಂತರವಾಗಿ ಕೆಳಕ್ಕೆ ಬಾಗಿಸುವುದನ್ನು ತಪ್ಪಿಸಿ.
2. ಆಗಾಗ ವಿರಾಮ ತೆಗೆದುಕೊಳ್ಳಿ: ದೀರ್ಘಕಾಲ ನಿರಂತರವಾಗಿ ಸ್ಕ್ರೀನ್ ನೋಡುವ ಬದಲು ಮಧ್ಯೆ ಮಧ್ಯೆ ವಿರಾಮ ನೀಡಿ.
3. ಭಂಗಿಯ ಬಗ್ಗೆ ಗಮನ ಕೊಡಿ: ಕುಳಿತುಕೊಳ್ಳುವಾಗ ಬೆನ್ನು ನೇರವಾಗಿರಲಿ ಮತ್ತು ಭುಜಗಳನ್ನು ಆರಾಮದಾಯಕ ಸ್ಥಿತಿಯಲ್ಲಿ ಇಡಿ.
4. ಕುತ್ತಿಗೆಗೆ ವಿಶ್ರಾಂತಿ ನೀಡಿ: ಒಂದೇ ಭಂಗಿಯಲ್ಲಿ ದೀರ್ಘಕಾಲ ಇರದೆ ಕುತ್ತಿಗೆ ಮತ್ತು ಭುಜಗಳನ್ನು ನಿಧಾನವಾಗಿ ಚಲಿಸುವಂತೆ ಮಾಡಿ.
5. ಫೋನ್ ಸ್ವಚ್ಛವಾಗಿಡಿ: ಪರದೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಚರ್ಮದ ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಫೋನ್ ನಮ್ಮ ಸಂಗಾತಿಯಲ್ಲ
ಫೋನ್ ನಮ್ಮ ಒಂಟಿತನ, ಬೇಸರ ಕಳೆಯಲು ಇರುವ ಸಂಗಾತಿಯಲ್ಲ. ಅದ್ದರಿಂದ ಅಗತ್ಯತೆಗೆ ತಕ್ಕಂತೆ ಮಿತವಾಗಿ ಬಳಸಬೇಕು. ಬೇಸರ ಕಳೆಯಲು ಮೊಬೈಲ್ ಬದಲಾಗಿ ಒಳ್ಳೆಯ ಹವ್ಯಾಸ, ಸಂಗೀತ, ಪುಸ್ತಕ ಓದುವುದು ಗೆಳೆಯರ ಜೊತೆ ಚರ್ಚಿಸುವುದು, ವಾಕಿಂಗ್ ಅಭ್ಯಾಸ ಮಾಡಿಕೊಳ್ಳಬೇಕು. ಇಂತಹ ಹವ್ಯಾಸಗಳು ನಮ್ಮ ಬೇಸರವನ್ನು ಇಲ್ಲವಾಗಿಸುತ್ತದೆ.
ಇಷ್ಟೆಲ್ಲ ಹೇಳಿದ ಮೇಲೆ ಬೃಂದಾಳ ರೀತಿ ನಾವು ಬೇಸರ ಕಳೆಯಲು ರೀಲ್ಸ್ ಮೊರೆ ಹೋಗ್ಬೇಕಾ? ಅಥವಾ ಒಳ್ಳೆಯ ಆರೋಗ್ಯಕರ ಮಾರ್ಗದಲ್ಲಿ ಸಾಗಬೇಕಾ ಎಂಬದು ನಮ್ಮ ವಿವೇಚನೆಗೆ ಬಿಟ್ಟಿದ್ದು. ವೈದ್ಯರು ಸಲಹೆ ನೀಡಿದ ಮೇಲೆ ಈಗ ಈ ಅಭ್ಯಾಸ ಬಿಟ್ಟು ಆರೋಗ್ಯವಾಗಿದ್ದೇನೆ ಎನ್ನುತ್ತಾರೆ ಬೃಂದಾ!
