ಚಿಕ್ಕಬಳ್ಳಾಪುರ : 15 ರಿಂದ 18 ವರ್ಷದ ಒಳಗಿನ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲು ಅವರು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ನಾಳೆ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಮತ್ತು ಇಂದು ಕೋವಿಡ್ ಲಸಿಕೆ ಪಡೆಯದೇ ಬಾಕಿ ಉಳಿದಿರುವ ವಿವಿಧ ಶಾಲಾ ಕಾಲೇಜುಗಳ 15 ವರ್ಷಕ್ಕೂ ಮೇಲ್ಪಟ್ಟ ಮಕ್ಕಳೆಲ್ಲರನ್ನು ಜನವರಿ 5 ರಂದೇ ಕೋವಿಡ್ ಲಸಿಕಾಕರಣದ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಯುವ ಕೋವಿಡ್ ಲಸಿಕಾ ಮೇಳ ಆಯೋಜನೆಯ ಪೂರ್ವ ಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಯುವ ಜನತೆಯನ್ನು ಲಸಿಕಾಕರಣದ ವ್ಯಾಪ್ತಿಗೆ ಒಳಪಡಿಸಿ ಕೋವಿಡ್‍ನಿಂದ ಸಂಪೂರ್ಣ ರಕ್ಷಣೆಗೆ ತರಲು ಜಿಲ್ಲೆಯಲ್ಲಿ ಲಸಿಕಾ ಮೇಳವನ್ನು ಹಮ್ಮಿಕೊಳ್ಳುವಂತೆ ನಿರ್ದೇಶಿಸಿದ್ದಾರೆ. ಅದರಂತೆ ಜಿಲ್ಲೆಯಾದ್ಯಂತ ವಿವಿಧ ಶಾಲಾ ಕಾಲೇಜುಗಳಲ್ಲಿ 70ಕ್ಕೂ ಹೆಚ್ಚು ಸತ್ರ(Sessioಟಿs)ಗಳೊಂದಿಗೆ ಜನವರಿ 5ರಂದು ಕೋವಿಡ್ ಯುವ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್
Advertisement
Advertisement
40 ಸಾವಿರಕ್ಕೂ ಹೆಚ್ಚಿನ ಗುರಿ
ಜನವರಿ 3 ರಿಂದ 15 ರವರೆಗೂ 18 ವರ್ಷದ ಒಳಗಿನ ಲಸಿಕೆ ಪಡೆಯಲು ಅರ್ಹರಿರುವ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ಭರದಿಂದ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ ಈ ವಯೋಮಾನದ 65,648 ಮಕ್ಕಳಿದ್ದು, ಈ ಪೈಕಿ ಜನವರಿ 3ರಂದು ಜಿಲ್ಲೆಯಾದ್ಯಂತ ಸುಮಾರು 7 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಇಂದು ಕೂಡ ಈ ಸಂಖ್ಯೆ ದ್ವಿಗುಣ ಆಗಲಿದೆ. ಇನ್ನುಳಿದ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಾಳೆಯ ಯುವ ಲಸಿಕಾ ಮೇಳದಲ್ಲಿ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮನ್ವಯತೆಯೊಂದಿಗೆ ಯೋಜನೆ ರೂಪಿಸಿಕೊಂಡು ಆರೋಗ್ಯಾಧಿಕಾರಿಗಳ ಮಟ್ಟದಲ್ಲಿ ಜಿಲ್ಲೆಯಾದ್ಯಂತ ತಂಡಗಳನ್ನು ರಚಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ನಾಳೆಯೇ ಲಸಿಕಾಕರಣ ಮಾಡಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
Advertisement
ಯಾರು ವಂಚಿತರಾಗಬಾರದು
ಜನವರಿ 5 ರಂದು ಶಾಲಾಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳೆಲ್ಲರಿಗೂ ಲಸಿಕೆ ನೀಡಲಾಗುವುದು. ಇನ್ನುಳಿದಂತೆ ಗೈರು ಹಾಜರಾಗುವ ಹಾಗೂ ಶಾಲೆಯಿಂದ ಹೊರಗುಳಿದಿರುವ 15 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೂ ಸಹ ಒಂದೆರಡು ದಿನಗಳಲ್ಲಿ ಲಸಿಕೆ ನೀಡಲು ಅಧಿಕಾರಿಗಳು ಅಗತ್ಯ ಕ್ರಮ ರೂಪಿಸಿ ಲಸಿಕೆ ಹಾಕಿಸಬೇಕು ಎಂದರು. ಜಿಲ್ಲೆಯಲ್ಲಿ 15 ವರ್ಷಕ್ಕೂ ಮೇಲ್ಪಟ್ಟ ಯಾವುದೇ ಮಕ್ಕಳು ಲಸಿಕಾಕರಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯಸ್ಥರು, ಬಿಇಒಗಳು ಹೆಚ್ಚಿನ ನಿಗಾ ವಹಿಸಬೇಕು ಎಂದರು.
Advertisement
ತ್ವರಿತವಾಗಿ ಎರಡೂ ಡೋಸ್ ಮುಗಿಸಿ
ಹದಿನೈದು ವರ್ಷಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಗೈರು ಹಾಜರಾಗದಂತೆ ವಿದ್ಯಾರ್ಥಿಗಳ ಪೋಷಕರು ನಿಗಾ ವಹಿಸಿ ಮಕ್ಕಳಲ್ಲಿ ಧೈರ್ಯ ತುಂಬಿ ಶಾಲೆಗಳಿಗೆ ಕಳಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಪೋಷಕರಲ್ಲಿ ಮನವಿ ಮಾಡಿದರು. ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಪಡೆಯಲು ಅರಿವು ಮೂಡಿಸುವ ಜೊತೆಗೆ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೇರೆಪಿಸಬೇಕಾಗಿದೆ ಎಂದು ಸಲಹೆ ನೀಡಿದರು. ಇದಲ್ಲದೆ 18 ವರ್ಷಕ್ಕೂ ಮೇಲ್ಪಟ್ಟ ಅರ್ಹರೆಲ್ಲರಿಗೆ 2ನೇ ಮತ್ತು ಮೊದಲನೇ ಡೋಸ್ ಲಸಿಕಾಕರಣವೂ ಎಂದಿನಂತೆ ಮುಂದುವರಿಯಲಿದೆ. ಒಟ್ಟಾರೆ 18 ವರ್ಷಕ್ಕೂ ಮೇಲ್ಪಟ್ಟ ಅರ್ಹರೆಲ್ಲರನ್ನು ತ್ವರಿತವಾಗಿ ಎರಡೂ ಡೋಸ್‍ಗಳ ಲಸಿಕಾಕರಣದ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾವಹಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಮೇಳವನ್ನು ಯಶಸ್ವಿಗೊಳಿಸಿ
ಜಿಲ್ಲೆಯಲ್ಲಿ ಈವರೆಗೆ 18 ವರ್ಷಕ್ಕೂ ಮೇಲ್ಪಟ್ಟ ಜನರಿಗೆ ಲಸಿಕಾಕರಣ ಮಾಡಿದ ಮೆಗಾ ಲಸಿಕಾ ಮೇಳ, ಉತ್ಸವ ಹಾಗೂ ಅಭಿಯಾನಗಳಲ್ಲಿ ಜಿಲ್ಲೆಯ ಜನರು ಅತ್ಯುತ್ಸಾಹಿ ಸ್ಪಂದನಾಶೀಲರೂ ಎಂದು ಹೆಸರು ಪಡೆದು ಉತ್ತಮ ಸ್ಪಂದನೆ ನೀಡುವ ಮೂಲಕ ರಾಜ್ಯಮಟ್ಟದ ಪಟ್ಟಿಯಲ್ಲಿ ಹಲವು ಬಾರಿ ಪ್ರಥಮ ಸ್ಥಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಗಳಿಸಿತ್ತು. ಅದೇ ರೀತಿ 15 ವರ್ಷಕ್ಕೂ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆಯುವ ಮೂಲಕ ಜನವರಿ 5ರ ಲಸಿಕಾ ಮೇಳವನ್ನು ಸಹ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಕರೆ ನೀಡಿದರು.