Friday, 21st September 2018

Recent News

ಗುರುವಾರ ಬೆಳಿಗ್ಗೆ ಬಿಎಸ್‍ವೈ ಪ್ರಮಾಣವಚನ : ಬಿಜೆಪಿಗೆ ಗವರ್ನರ್ ಅನುಮತಿ

ಬೆಂಗಳೂರು: ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಗುರುವಾರ ಬೆಳಿಗ್ಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲ ವಿ.ಆರ್. ವಾಲಾ  ಬಿಜೆಪಿ ಸರ್ಕಾರ ರಚನೆ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಬೆಳಗ್ಗೆ 8.30ಕ್ಕೆ ರಾಜಭವನದಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ. ಪ್ರಮಾಣ ವಚನ ಸ್ವೀಕರಿಸಿದರೂ ಸರ್ಕಾರ ರಚನೆಗೆ 15  ದಿನ ಕಾಲಾವಕಾಶವನ್ನು ರಾಜ್ಯಪಾಲರು ನೀಡಿದ್ದಾರೆ.

ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿ, ಗುರುವಾರ ಬೆಳಗ್ಗೆ ರಾಜಭವನದಲ್ಲಿ ಬಿಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂತಸ ಗಳಿಗೆಯಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಸರ್ಕಾರ ರಚನೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಿತು. ಶಾಸಕಾಂಗದ ನಾಯಕರಾಗಿ ಯಡಿಯೂರಪ್ಪನವರನ್ನು ಆಯ್ಕೆ ಮಾಡಿದ ಬಳಿಕ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಸಂಜೆಯ ವೇಳೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಹೀಗಾಗಿ ರಾಜ್ಯಪಾಲರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಿತ್ತು. ಈಗ ರಾಜ್ಯಪಾಲರು ಬಿಜೆಪಿಗೆ ಅನುಮತಿ ನೀಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುವ ಸಾಧ್ಯತೆಯಿದೆ.

ಬಿಎಸ್ ಯಡಿಯೂರಪ್ಪ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಈಗಾಗಲೇ ಅರ್ಚಕರು ಆಗಮಿಸಿದ್ದಾರೆ.

Leave a Reply

Your email address will not be published. Required fields are marked *