ಸ್ನೇಹ, ಪ್ರೀತಿಯ ತೊಳಲಾಟದಲ್ಲಿ ಬದುಕಿನ ವಾಸ್ತವತೆಯನ್ನು ತಿಳಿಸುವ ಟಾಮ್ ಅಂಡ್ ಜೆರ್ರಿ

Public TV
2 Min Read
Tom and Jerry Nishit Korodi Chaitra Rao 2

ಚಿತ್ರ: ಟಾಮ್ ಅಂಡ್ ಜೆರ್ರಿ
ನಿರ್ದೇಶನ: ರಾಘವ್ ವಿನಯ್ ಶಿವಗಂಗೆ
ನಿರ್ಮಾಪಕ: ರಾಜು ಶೇರಿಗಾರ್
ಸಂಗೀತ: ಮ್ಯಾಥ್ಯೂಸ್ ಮನು
ಛಾಯಾಗ್ರಹಣ: ಸಂಕೇತ್ ಎಂವೈಸ್
ತಾರಾಗಣ: ನಿಶ್ಚಿತ್ ಕೊರೋಡಿ, ಚೈತ್ರಾ ರಾವ್, ತಾರಾ, ಜೈಜಗದೀಶ್, ಪ್ರಕಾಶ್ ತುಮಿನಾಡು, ಕಡ್ಡಿಪುಡಿ ಚಂದ್ರು, ಇತರರು

ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ ಪರಿಚಿತರಾಗಿದ್ದ ರಾಘವ್ ವಿನಯ್ ಶಿವಗಂಗೆ ಕೆಜಿಎಫ್ ಸಿನಿಮಾ ಡೈಲಾಗ್ ರೈಟರ್ ಆಗಿ ಮುನ್ನೆಲೆಗೆ ಬಂದು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಟಾಮ್ ಅಂಡ್ ಜೆರ್ರಿ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

Tom and Jerry film

ಟಾಮ್ ಅಂಡ್ ಜೆರ್ರಿ ಸತ್ಯ ಹಾಗೂ ಧರ್ಮ ಇಬ್ಬರು ಸ್ನೇಹಿತರ ನಡುವೆ ನಡೆಯುವ ಕಥೆ. ಒಂದು ಜರ್ನಿಯಿಂದ ಆರಂಭವಾಗುವ ಕಥೆಯಲ್ಲಿ ಊಹಿಸಲಾಗದ ಫ್ಲ್ಯಾಶ್ ಬ್ಯಾಕ್ ಸ್ಟೋರಿಯಿದೆ. ಮಧ್ಯಮ ವರ್ಗದ ಹುಡುಗ ಧರ್ಮ ಹಾಗೂ ಶ್ರೀಮಂತಿಕೆಯಲ್ಲಿ ಬೆಳೆದ ಸತ್ಯ, ಇಬ್ಬರ ಜೀವನದ ದೃಷ್ಟಿಕೋನ ತುಂಬ ಭಿನ್ನವಾದದ್ದು. ನಾಯಕ ಧರ್ಮನಿಗೆ ಮಧ್ಯಮ ವರ್ಗದ ಹೊಂದಾಣಿಕೆ ಜೀವನಕ್ಕಿಂತ ಬದುಕಿದ್ರೆ ಧಾಮ್ ಧೂಮ್ ಆಗಿ ಬದುಕಬೇಕೆಂಬ ಆಸೆ. ಸತ್ಯಳಿಗೆ ಶ್ರೀಮಂತಿಕೆಯ ಜೀವನ ಅನ್ನೋದೇ ಬೇಸರದ ಮಾತು. ಜೀವನದ ಬಗೆಗೆ ಪರಸ್ಪರ ವಿರುದ್ಧ ದೃಷ್ಟಿಕೋನ ಹೊಂದಿರುವ, ವಾದ ವಿವಾದ, ಸತ್ಯ ಮಿಥ್ಯಗಳ ಹುಡುಕಾಟದಲ್ಲೇ ಸಾಗುತ್ತಿದ್ದ ಇವರ ಸ್ನೇಹ ಪ್ರೀತಿ ಹಂತ ತಲುಪಿದಾಗ ಏನಾಗುತ್ತದೆ ಅನ್ನೋದೇ ಕುತೂಹಲದ ಎಳೆ. ಅದರೊಂದಿಗೆ ಒಂದಿಷ್ಟು ರೋಚಕ ಟ್ವಿಸ್ಟ್, ಟರ್ನ್ ಗಳು, ಆಕ್ಷನ್ ಸೀನ್ ಗಳು ಬೆರೆತು ಮಜಾ ನೀಡುತ್ತದೆ ಸಿನಿಮಾ. ಇದನ್ನೂ ಓದಿ: ಟಾಮ್ ಅಂಡ್ ಜೆರ್ರಿ’ ಟ್ರೇಲರ್‌ಗೆ ಸಿಕ್ತು ಒಂದು ಮಿಲಿಯನ್‍ಗೂ ಹೆಚ್ಚಿನ ಜನರ ಪ್ರೀತಿ

Tom and Jerry Nishit Korodi Chaitra Rao
ಎಲ್ಲಾ ಸಿನಿಮಾಗಳಲ್ಲೂ ಇರುವಂತೆ ಇಲ್ಲೂ ಸ್ನೇಹ, ಪ್ರೀತಿ, ಸೆಂಟಿಮೆಂಟ್‍ಗಳಿವೆ. ಆದ್ರೆ ಅದರಾಚೆ ಸಿನಿಮಾ ವಿಭಿನ್ನವಾಗಿ ನಿಲ್ಲೋದು ಜನರಿಗೆ ತಲುಪಿಸಲು ಹೊರಟ ಸಂದೇಶದಿಂದ. ಹಣ, ಪ್ರೀತಿ, ಭಾವನೆಗಳು, ತಂದೆ ತಾಯಿ ಪ್ರಾಮುಖ್ಯತೆಯನ್ನು ನಿರ್ದೇಶಕರು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.  ಆದ್ರೆ ಅದನ್ನು ಹೇಳುವ ಬರದಲ್ಲಿ ದ್ವಿತೀಯಾರ್ಧ ಕೊಂಚ ಲ್ಯಾಗ್ ಎನಿಸಿ ಪ್ರೇಕ್ಷಕರನ್ನು ಕಾಡುತ್ತದೆ. ರೊಟೀನ್ ಸ್ಟೋರಿ ಎನಿಸಿದ್ರು ಕೂಡ ಹೊಸತರನಾದ ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಅದನ್ನು ಮರೆಮಾಚುತ್ತದೆ. ಒಂದಿಷ್ಟು  ಕಡೆ ಎಡವಿದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಚಿತ್ರತಂಡ ಗೆದ್ದಿದೆ ಎನ್ನಬಹುದು.

Tom and Jerry Nishit Korodi Chaitra Rao 3

ನಾಯಕ ನಿಶ್ಚಿತ್ ಕೊರೋಡಿ ನಟನೆಯಲ್ಲಿ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ಚಂದನವನಕ್ಕೆ ಭರವಸೆಯ ನಟನಾಗುವ ಎಲ್ಲಾ ಲಕ್ಷಣಗಳು ಇವರಲ್ಲಿವೆ. ನಟನೆ, ಆಕ್ಷನ್, ಹಾಡು, ಸೆಂಟಿಮೆಂಟ್ ಹೀಗೆ ಎಲ್ಲಾ ತರವಾದ ದೃಶ್ಯಗಳಲ್ಲೂ ಇವರ ಅಭಿನಯ ಗಮನ ಸೆಳೆಯುತ್ತದೆ. ಜೋಡಿಹಕ್ಕಿಯ ಜಾನಕಿ ಟೀಚರ್ ಚೈತ್ರಾ ರಾವ್ ಈ ಸಿನಿಮಾದಲ್ಲಿ ಜಾಸ್ತಿನೇ ಇಷ್ಟವಾಗುತ್ತಾರೆ. ಹೊಸ ಬಗೆಯ ಪಾತ್ರ ಹಾಗೂ ಅವ್ರ ಲುಕ್, ಚಿನಕುರುಳಿಯಂತ ಮಾತು ಚಿತ್ರದ ಪ್ರಮುಖ ಆಕರ್ಷಣೆ ಅಂದ್ರೆ ತಪ್ಪಾಗೋದಿಲ್ಲ. ತಾಯಿ ಪಾತ್ರದಲ್ಲಿ ನಟಿ ತಾರಾ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.  ಚಿತ್ರದಲ್ಲಿ ಅನುಭವಿ ಕಲಾವಿದರ ಸಂಖ್ಯೆ ದೊಡ್ಡದಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ  ಜೀವ ತುಂಬಿ ನ್ಯಾಯ ಒದಗಿಸಿದ್ದಾರೆ.


ಮ್ಯಾಥ್ಯೂಸ್ ಮನು ಸಂಗೀತ ಎಲ್ಲರನ್ನು ತಲೆದೂಗುವಂತೆ ಮಾಡುತ್ತೆ, ಹಿನ್ನೆಲೆ ಸಂಗೀತ ಕೂಡ ಹೊಸತನದೊಂದಿಗೆ ಅಷ್ಟೇ ಚೆಂದವಾಗಿ ಸಂಯೋಜನೆ ಮಾಡಿದ್ದಾರೆ. ಸಂಕೇತ್ ಎಂವೈಸ್ ಕ್ಯಾಮೆರಾವರ್ಕ್ ಹಾಡು, ಟ್ರೇಲರ್ ನಲ್ಲಿ ನೋಡಿ ಇಷ್ಟಪಟ್ಟವರಿಗೆ ಸಿನಿಮಾದಲ್ಲಿ ಮತ್ತಷ್ಟು ಇಷ್ಟವಾಗುತ್ತೆ. ಅರ್ಜುನ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಸಾಹಸ ದೃಶ್ಯಗಳು ಕೂಡ ಅಷ್ಟೇ ಗಮನ ಸೆಳೆಯುತ್ತವೆ.

ಪಬ್ಲಿಕ್ ರೇಟಿಂಗ್: 3.5 /5

Share This Article
Leave a Comment

Leave a Reply

Your email address will not be published. Required fields are marked *