Bengaluru CityCinemaLatestMain PostSandalwood

‘ಟಾಮ್ ಅಂಡ್ ಜೆರ್ರಿ’ ಟ್ರೇಲರ್‌ಗೆ ಸಿಕ್ತು ಒಂದು ಮಿಲಿಯನ್‍ಗೂ ಹೆಚ್ಚಿನ ಜನರ ಪ್ರೀತಿ

`ಹಾಯಾಗಿದೆ ಎದೆಯೊಳಗೆ’ ಎಂಬ ಹಾಡಿನ ಮೂಲಕವೇ ಚಿತ್ರರಸಿಕರಿಗೆ ಸಿನಿಮಾದ ಆಮಂತ್ರಣ ನೀಡಿ ಭರವಸೆಯ ಅಚ್ಚೊತ್ತಿದ್ದ ಚಿತ್ರತಂಡ ಟಾಮ್ ಅಂಡ್ ಜೆರ್ರಿ. ಹಾಡುಗಳ ಮೂಲಕವೇ ಮೋಡಿ ಮಾಡಿ ಈಗ ಮತ್ತಷ್ಟು ಅಚ್ಚರಿ ಹೊತ್ತ ಟ್ರೇಲರ್ ಬಿಡುಗಡೆ ಮಾಡಿ ಮಗದಷ್ಟು ನಿರೀಕ್ಷೆ ಹೆಚ್ಚಿಸಿದೆ. ಟ್ರೇಲರ್ ಕಂಡ ಪ್ರೇಕ್ಷಕರ ಮನದಲ್ಲೀಗ ಒಂದೇ ಆಸೆ ಅದು ಸಿನಿಮಾ ಕಣ್ತುಂಬಿಕೊಳ್ಳಲೇಬೇಕೆಂದು.

ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಸಿನಿಮಾ ಟಾಮ್ ಅಂಡ್ ಜೆರ್ರಿ. ಚಿತ್ರದ ಎರಡು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಬಯಕೆ ಸೃಷ್ಟಿಸಿದ್ದ ಈ ಚಿತ್ರತಂಡವೀಗ ಭರವಸೆಯ ಹಾಗೂ ಫ್ರೆಶ್ ಎನಿಸುವ ಟ್ರೇಲರ್ ತುಣುಕನ್ನು ಬಿಡುಗಡೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಏನೋ ಹೊತನವಿದೆ, ಚಿತ್ರತಂಡ ಹೊಸತೇನೋ ಪ್ರಯತ್ನ ಪಟ್ಟಿದೆ ಎಂಬುದನ್ನು ಟ್ರೇಲರ್ ನೋಡಿದ ಮೊದಲ ಬಾರಿಗೆ ಅನ್ನಿಸದೇ ಇರದು. ಅದಕ್ಕೆ ಸಾಕ್ಷಿ ಎನ್ನುವಂತೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ಕಮೆಂಟ್ ಸೆಕ್ಷನ್ ನಲ್ಲಿ ಚಿತ್ರದ ಮೇಕಿಂಗ್, ಹೊಸತನದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಟ್ರೇಲರ್ ತುಣುಕಿನಲ್ಲಿರುವ ಡೈಲಾಗ್? ಗಳು ಸಖತ್ ವೈರಲ್ ಆಗುತ್ತಿವೆ, ಮೆಚ್ಚುಗೆ ಗಳಿಸಿಕೊಳ್ಳುತ್ತಿವೆ. ಟಾಮ್ ಅಂಡ್ ಜೆರ್ರಿಯಂತೆ ಕಿತ್ತಾಡೋ ಸ್ನೇಹಿತರ ತರಲೆ ತುಂಟಾಟ ಒಂದು ಕಡೆಯಾದ್ರೆ, ಬದುಕಿನ ಬಗ್ಗೆ ಸ್ವಾರಸ್ಯಕರವಾದ ಸತ್ಯಾಸತ್ಯತೆಯನ್ನೇನೋ ಹೇಳ ಹೊರಟಿದೆ ಎನ್ನುವುದರ ಸುಳಿವನ್ನೂ ಟ್ರೇಲರ್ ನೀಡಿದೆ. ಒಟ್ಟಿನಲ್ಲಿ, ಟಾಮ್ ಅಂಡ್ ಜೆರ್ರಿ ಟ್ರೇಲರ್ ಹೊಸ ಬಝ್ ಕ್ರಿಯೇಟ್ ಮಾಡಿರೋದಂತೂ ಸುಳ್ಳಲ್ಲ.

ನವೆಂಬರ್ 12ಕ್ಕೆ ಬಿಡುಗಡೆಯಾಗಲು ಸಕಲ ಸಿದ್ಧವಾಗಿ ನಿಂತಿರುವ ಸಿನಿಮಾ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಕನಸಿನ ಸಿನಿಮಾವಾಗಿದೆ. ಚಿತ್ರಕ್ಕೆ ಗಂಟುಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಜೋಡಿಹಕ್ಕಿ ಖ್ಯಾತಿಯ ಚೈತ್ರಾ ರಾವ್ ನಾಯಕ ಹಾಗೂ ನಾಯಕಿ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಇಬ್ಬರ ಕಾಂಬಿನೇಶನ್ ಸಖತ್ ಮೋಡಿ ಮಾಡಿದ್ದು, ಪೂರ್ಣ ಪ್ರಮಾಣದಲ್ಲಿ ಈ ಜೋಡಿಯನ್ನು ಸ್ಕ್ರೀನ್ ಮೇಲೆ ಕಾಣಲು ಕಾತರರಾಗಿದ್ದಾರೆ ಚಿತ್ರ ಪ್ರೇಮಿಗಳು.

ಚಿತ್ರಕ್ಕೆ ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ನಿರ್ಮಾಪಕ ರಾಜು ಶೇರಿಗಾರ್ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ವಿನಯ್ ಚಂದ್ರ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರ ಮೊದಲ ಸಿನಿಮಾ ಇದಾಗಿದ್ದು ತಮ್ಮದೇ ಬ್ಯಾನರ್ ನಡಿ ಚೊಚ್ಚಲ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಮೊದಲ ಸಿನಿಮಾ ಬಿಡುಗಡೆಯ ಸಂತಸ ಅವರಲ್ಲಿಯೂ ಮನೆ ಮಾಡಿದೆ.

ಟಾಮ್ ಅಂಡ್ ಜೆರ್ರಿ ಚಿತ್ರದ ತಾರಾಬಳಗವೂ ದೊಡ್ಡಿದಿದೆ. ಹಿರಿಯ ಹಾಗೂ ಅನುಭವಿ ಕಲಾವಿದರ ದಂಡು ಸಿನಿಮಾದಲ್ಲಿದ್ದು, ಸೂರ್ಯ ಶೇಖರ್, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮ್ಯಾಥೂಸ್ ಮನು ಸಂಗೀತದಲ್ಲಿ ಈಗಾಗಲೇ ಎರಡು ಹಾಡುಗಳು ಮನಸೂರೆಗೊಂಡಿದ್ದು, ಉಳಿದ ಹಾಡುಗಳ ಮೇಲೂ ಅಪಾರ ನಿರೀಕ್ಷೆ ಇದೆ. ಉಳಿದಂತೆ ಸಂಕೇತ್ ಎಂವೈಎಸ್ ಛಾಯಾಗ್ರಹಣ, ಸೂರಜ್ ಅಂಕೋಲೆಕರ್ ಸಂಕಲನ ಚಿತ್ರಕ್ಕಿದೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫೀಕೇಟ್ ಪಡೆದಿರುವ ಟಾಮ್ ಅಂಡ್ ಜೆರ್ರಿ ನವೆಂಬರ್ 12ಕ್ಕೆ ಅದ್ದೂರಿಯಾಗಿ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ.

Leave a Reply

Your email address will not be published.

Back to top button