ಬೆಂಗಳೂರು: ಏಪ್ರಿಲ್ 1ರಿಂದ ಹೊಸ ಟೋಲ್ ನೀತಿ ಜಾರಿಯಾಗಲಿದ್ದು, ಕರ್ನಾಟಕದಾದ್ಯಂತ ಟೋಲ್ ಶುಲ್ಕ (Toll Price) ಶೇ.5ರಷ್ಟು ಹೆಚ್ಚಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಗಳು ತಿಳಿಸಿವೆ.
ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಕನಿಷ್ಠ ಶೇ 3 ರಿಂದ ಗರಿಷ್ಠ 5 ರಷ್ಟು ಏರಿಕೆಯಾಗಲಿವೆ ಎಂದು ತಿಳಿದುಬಂದಿದೆ. ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ (Toll Plaza) ಹೆಚ್ಚಿನ ಟೋಲ್ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ.5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ.
ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ಸುಂಕಗಳಿಗೆ ಕೇಂದ್ರ ಸರ್ಕಾರ ಶೀಘ್ರವೇ ಹೊಸ ನೀತಿ ಪ್ರಕಟಿಸಲಿದೆ. ಇದರಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿ ದೊರೆಯಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರೂ ಅದಿನ್ನೂ ಜಾರಿಯಾಗಿಲ್ಲ. 2008ರ ನೀತಿಯೇ ಅನ್ವಯವಾಗಲಿದೆ. ಟೋಲ್ ಗುತ್ತಿಗೆ ಅವಧಿಯನ್ನು ಆಧರಿಸಿ ದರಗಳು ಬದಲಾಗಲಿವೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ತಿಳಿಸಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಟೋಲ್ ಹೆಚ್ಚಳ?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹೇಳಿರುವಂತೆ, ಗರಿಷ್ಠ ಶೇ.5 ಮತ್ತು ಕನಿಷ್ಠ ಶೇ.3 ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಬೆಂಗಳೂರು-ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗ್ಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ, ಮತ್ತು ಹುಲಿಕುಂಟೆ ಹಾಗೂ ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಟೋಲ್ ಪ್ಲಾಜಾಗಳಲ್ಲಿ ದರಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ದೇಶದಾದ್ಯಂತ ಒಟ್ಟು 323 ರಾಜ್ಯ ಹೆದ್ದಾರಿ ಟೋಲ್ ಫ್ಲಾಜಾ ಸೇರಿದಂತೆ, ದೇಶದಲ್ಲಿ ಒಟ್ಟು 1,181 ಟೋಲ್ ಗಳಿವೆ. 2023-24 ರಲ್ಲಿ 42,196 ಕೋಟಿ ರೂ., 2024-25 ರಲ್ಲಿ 64,809 ಕೋಟಿ ರೂ. ಟೋಲ್ ಸಂಗ್ರಹ ಆಗಿದೆ. ಈ ವರ್ಷ ಈ ಗುರಿಯನ್ನ 1 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ 58 ಟೋಲ್ ಫ್ಲಾಜಾಗಳಿದ್ದು, ಕಳೆದ 5 ವರ್ಷಗಳಲ್ಲಿ ಈ ಟೋಲ್‌ಗಳಿಂದ 13,702 ಕೋಟಿ ಸಂಗ್ರಹವಾಗಿದೆ.