ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

Public TV
2 Min Read
IOC

ಟೋಕಿಯೊ: ಕೊರೊನಾ ವೈರಸ್ ಮರಣ ಮೃದಂಗಕ್ಕೆ ವಿಶ್ವವೇ ತತ್ತರಿಸಿದ್ದು ಅನಿವಾರ್ಯವಾಗಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಆತಿಥೇಯ ರಾಷ್ಟ್ರ ಜಪಾನ್ ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್ ನಡೆಸುವುದಾಗಿ ಹೇಳುತ್ತಿದ್ದವು. ಆದರೆ ಈಗ ಒಲಿಂಪಿಕ್ಸ್ ಮುಂದೂಡುವ ನಿಲುವನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‍ಗೆ ಸಂಬಂಧಿಸಿದಂತೆ ಕೆನಡಾ ಮತ್ತು ಆಸ್ಟ್ರೇಲಿಯಾ ಪ್ರಮುಖ ನಿರ್ಧಾರ ಕೈಗೊಂಡಿವೆ. ಟೋಕಿಯೊ ಕ್ರೀಡಾಕೂಟಕ್ಕೆ ತಮ್ಮ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಉಭಯ ದೇಶಗಳು ಸ್ಪಷ್ಟನೆ ನೀಡಿವೆ. ಇದನ್ನೂ ಓದಿ: ಕೊರೊನಾ ಭೀತಿ ಇದ್ರೂ ಒಲಿಂಪಿಕ್ ಜ್ಯೋತಿ ನೋಡಲು ಅರ್ಧ ಕಿ.ಮೀ. ಕ್ಯೂ

ಕೆನಡಾ ಒಲಿಂಪಿಕ್ಸ್ ಸಮಿತಿ (ಸಿಒಸಿ) ಮತ್ತು ಕೆನಡಾ ಪ್ಯಾರಾ ಒಲಿಂಪಿಕ್ಸ್ ಸಮಿತಿ (ಸಿಪಿಸಿ) ಕ್ರೀಡಾಪಟುಗಳ ಆಯೋಗವು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಕೆನಡಾ ಸರ್ಕಾರದೊಂದಿಗೆ ಚರ್ಚಿಸಿದ್ದು, ತಮ್ಮ ಆಟಗಾರರನ್ನು ಟೋಕಿಯೊಗೆ ಕಳುಹಿಸದಿರಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ಆಟಗಾರರ ಮತ್ತು ವಿಶ್ವ ಸಮುದಾಯದ ಆರೋಗ್ಯಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.  ಇದನ್ನೂ ಓದಿ: ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

IOC A

ಒಲಿಂಪಿಕ್ಸ್ ಅನ್ನು ಮುಂದೂಡಲು ಒಂದು ಆಯ್ಕೆ ಇದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ. ಆದರೆ ರದ್ದು ಮಾಡುವುದು ನಮ್ಮ ಕಾರ್ಯಸೂಚಿಯಲ್ಲಿಲ್ಲ. ‘ನಾವು ಜಗತ್ತಿನಾದ್ಯಂತÀ ಪರಿಸ್ಥಿತಿ ಮತ್ತು ಒಲಿಂಪಿಕ್ಸ್‍ನ ಪ್ರಭಾವದ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿದ್ದೇವೆ. ಮುಂದಿನ 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಸೋಮವಾರ ಜಪಾನ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಶಿಂಜೊ ಅಬೆ, ‘ನಾವು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದೇವೆ. ಆಟಗಾರರ ಸುರಕ್ಷತೆಗೆ ಧಕ್ಕೆಯುಂಟಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಅನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ನಾವು ಮುಂದೂಡುತ್ತೇವೆ ಎಂದು ಹೇಳಿದ್ದರು.

ಶೇ.70ರಷ್ಟು ಅಮೆರಿಕದ ಆಟಗಾರರು ಒಲಿಂಪಿಕ್ಸ್ ಅನ್ನು ಮುಂದೂಡಲು ಒಲವು ತೋರಿದ್ದಾರೆ. ಇತ್ತ ಕ್ರೀಡಾಕೂಟವು 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆದರೆ ಆಟಗಾರರನ್ನು ಕಳುಹಿಸುತ್ತೇವೆ ಎಂದು ಕೆನಡಾ ಮತ್ತು ಆಸ್ಟ್ರೇಲಿಯಾ ಪಟ್ಟು ಹಿಡಿದಿವೆ.

Share This Article
Leave a Comment

Leave a Reply

Your email address will not be published. Required fields are marked *