Connect with us

Corona

ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

Published

on

ವಾಷಿಂಗ್ಟನ್: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಭೀತಿ ಇಡೀ ಜಗತ್ತೆ ತತ್ತರಿಸಿದೆ. ಹೀಗಾಗಿ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ. ಈಗ ಟೋಕಿಯೊ ಒಲಿಂಪಿಕ್ಸ್ ಕೂಡ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕ್ರೀಡಾಪಟುಗಳು ಬಲವಂತದ ವಿಶ್ರಾಂತಿಗೆ ಜಾರಿದಂತಾಗಿದೆ.

ಕೊರೊನಾ ಎಫೆಕ್ಟ್ ನಿಂದಾಗಿ ವಿಶ್ರಾಂತಿ ಪಡೆಯುತ್ತಿರುವ ಅಮೆರಿಕದ ಬೀಚ್ ವಾಲಿಬಾಲ್ ಆಟಗಾರ್ತಿ ಏಪ್ರಿಲ್ ಎಲಿಜಬೆತ್ ರಾಸ್ ಮನೆಯಲ್ಲೇ ಒಬ್ಬರೇ ಅಭ್ಯಾಸ ನಡೆಸಿದ್ದಾರೆ. ರಾಸ್ ಅಭ್ಯಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

37 ವರ್ಷದ ಏಪ್ರಿಲ್ ಎಲಿಜಬೆತ್ ರಾಸ್ ಅಮೆರಿಕನ್ ವೃತ್ತಿಪರ ಬೀಚ್ ವಾಲಿಬಾಲ್ ಆಟಗಾರ್ತಿಯಾಗಿದ್ದಾರೆ. ಅವರು 2012ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಜೆನ್ನಿಫರ್ ಕೆಸ್ಸಿ ಅವರೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಬಳಿಕ 2016ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕೆರ್ರಿ ವಾಲ್ಷ್ ಜೆನ್ನಿಂಗ್ಸ್ ಅವರೊಂದಿಗೆ ಕಂಚಿನ ಪದಕ ಗೆದ್ದರು. ರಾಸ್ ಮತ್ತು ಕೆಸ್ಸಿ 2009ರ ಬೀಚ್ ವಾಲಿಬಾಲ್ ವಿಶ್ವ ಚಾಂಪಿಯನ್ ಆಗಿದ್ದರು.

2020ರ ಟೋಕಿಯೊ ಒಲಿಂಪಿಕ್ಸ್ ಮುಂದೂಡುವಂತೆ ಒತ್ತಡ ಹೆಚ್ಚಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸ್ಪ್ಯಾನಿಷ್ ಅಥ್ಲೆಟಿಕ್ಸ್ ಫೆಡರೇಶನ್, ನಾವು ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಪರವಾಗಿದ್ದೇವೆ. ಆದರೆ ಇಂದಿನ ಪರಿಸ್ಥಿತಿಗಳಲ್ಲಿ ಕ್ರೀಡಾಪಟುಗಳಿಗೆ ಸುರಕ್ಷತೆಯೊಂದಿಗೆ ಕ್ರೀಡಾ ಸಾಮಾಗ್ರಿ ಖಾತರಿಪಡಿಸುವಂತಹ ಯಾವುದೇ ಪರಿಸ್ಥಿತಿ ಇಲ್ಲ ಎನ್ನುವುದನ್ನ ನಾವು ಅರ್ಥಮಾಡಿಕೊಂಡಿದ್ದೇವೆ. ಕ್ರೀಡಾಪಟುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಕೂಟವನ್ನು ಮುಂದೂಡಬೇಕೆಂದು ನಾವು ಸಲಹೆ ನೀಡಿದ್ದೇವೆ ಎಂದು ತಿಳಿಸಿದೆ.

ಎಲ್ಲ ಗೊಂದಲಗಳಿಂದಾಗಿ ಆಟಗಾರರು ಫಜೀತಿಗೆ ಸಿಲುಕಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆ ಮಾಹಿತಿ ಪ್ರಕಾರ ಅಮೆರಿಕದಲ್ಲಿ 35,418 ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಈ ಪೈಕಿ 34,770 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ 175 ಜನರು ಗುಣಮುಖರಾಗಿದ್ದು, 473 ಜನ ಸಾವನ್ನಪ್ಪಿದ್ದಾರೆ.