ಆಂಬಿಡೆಂಟ್ ವಂಚನೆ ಪ್ರಕರಣ: ರೆಡ್ಡಿ ಶೋಧ ಕಾರ್ಯ ಎಲ್ಲಿಗೆ ಬಂತು? ಇಂದು ಏನಾಯ್ತು?

Public TV
3 Min Read
reddy a 1

ಬೆಂಗಳೂರು: ಆಂಬಿಡೆಂಟ್ ಹಗರಣದ ಡೀಲ್ ಮಾಸ್ಟರ್, ಗಣಧಣಿ-ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಿಸಿಬಿ ಪೊಲೀಸರಿಗೆ ಇನ್ನೂ ಚಳ್ಳೆಹಣ್ಣು ತಿನ್ನಿಸ್ತಲೇ ಇದ್ದಾರೆ. ರೆಡ್ಡಿ ಬೇಟೆಗೆ ಸಿಸಿಬಿ ತಂಡಗಳಾಗಿ ಬೆಂಗಳೂರು, ಬಳ್ಳಾರಿ, ಚಿತ್ರದುರ್ಗದ ಮೊಳಕಾಲ್ಮೂರು, ದೂರದ ಹೈದ್ರಾಬಾದ್‍ಗೆ ತೆರಳಿದ್ದರೂ ಸಣ್ಣ ಸುಳಿವೂ ಸಿಕ್ಕಿಲ್ಲ. ಹಾಗಾಗಿ, ರೆಡ್ಡಿ ತಲಾಶ್‍ಗೆ ಹೈದರಾಬಾದ್ ಪೊಲೀಸರ ಮೊರೆ ಹೋಗಿದ್ದಾರೆ.

ಮೊಬೈಲ್ ಟ್ರಾಪ್ ಪ್ಲಾನ್ ಮಾಡಿದರೂ ಸಿಸಿಬಿ ಸೋತಿದೆ. ಮೊಳಕಾಲ್ಮೂರಿನಲ್ಲೇ ರೆಡ್ಡಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಜ್ಞಾತ ಸ್ಥಳದಿಂದಲೇ ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ನಲ್ಲಿ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

TAJ WESTEND HOTEL Reddy 1 copy

ಈ ಮಧ್ಯೆ, ಜಾರಿ ನಿರ್ದೇಶನಾಲಯ ಎಂಟ್ರಿ ಸಾಧ್ಯತೆ ದಟ್ಟವಾಗಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಕೋರಿದೆ. ಜನವರಿಯಲ್ಲಿ ಫರೀದ್ ಅಹ್ಮದ್, ಮಗ ಅಫಾಕ್ ಅಹ್ಮದ್ ವಿಚಾರಣೆಗೆ ಒಳಪಡಿಸಿದ್ದಾಗ 1.97 ಕೋಟಿ ರೂ. ನಗದು ಸಿಕ್ಕಿತ್ತು. ಸಾರ್ವಜನಿಕರಿಗೆ ಶೇ.12ರಷ್ಟು ಬಡ್ಡಿ ಸಮೇತ ಕೊಡೋದಾಗಿ ಆಮಿಷವೊಡ್ಡಿ 954 ಕೋಟಿ ಸಂಗ್ರಹಿಸಿದ್ದಾರೆ. ಇದು ನಕಲಿ ಕಂಪನಿ ಅಂತ ಆರ್‌ಬಿಐಗೂ ಪತ್ರ ಬರೆದಿದ್ದೇವೆ ಅಂತ ಪತ್ರಿಕಾ ಪ್ರಕಟಣೆಯಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆ.

ಬಳ್ಳಾರಿಯ ಅಹಂಬಾವಿಯಲ್ಲಿರುವ ರೆಡ್ಡಿ ನಿವಾಸ ಕುಟೀರಾ ದೇಶದ ಎಲ್ಲಾ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾದ ಏಕೈಕ ನಿವಾಸ ಎಂಬ ಕುಖ್ಯಾತಿಯನ್ನು ಈಗ ಪಡೆದುಕೊಂಡಿದೆ. ಸಿಸಿಬಿ ಪೊಲೀಸರು ರೆಡ್ಡಿ ಕೇಸನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಈಗಾಗಲೇ ಅಲಿಖಾನ್ ಜಾಮೀನು ಪಡೆದುಕೊಂಡಿರುವುದರಿಂದ ಜನಾರ್ದನ ರೆಡ್ಡಿಗೆ ನಾಳೆ ನಿರೀಕ್ಷಣಾ ಜಾಮೀನು ಸಿಗುವ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಸಿಸಿಬಿ ಪೊಲೀಸರು ಹಲವು ಕಡೆ ಮಹಜರು ಮಾಡಿದ್ದರು. ಡೀಲ್ ನಡೆದ ಬೆಂಗಳೂರಿನ ತಾಜ್‍ವೆಸ್ಟ್ ಎಂಡ್‍ನಲ್ಲಿ ಆರೋಪಿ ಫರೀದ್‍ರನ್ನ ನಿನ್ನೆ ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು ಇವತ್ತು, ಬಳ್ಳಾರಿಯ ರೆಡ್ಡಿ ನಿವಾಸ ಕುಟೀರ, ಒಎಂಸಿ ಕಂಪನಿಯನ್ನು ಮಹಜರು ನಡೆಸಿದರು. ರೆಡ್ಡಿ ಸಿಗದ ಕಾರಣ ಮಾವ ಪರಮೇಶ್ವರ್ ರೆಡ್ಡಿ, ಅತ್ತೆ ನಾಗಲಕ್ಷ್ಮಮ್ಮ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತು.

reddy atte

ರೆಡ್ಡಿ ಆಪ್ತರ ಮನೆ ಮೇಲೆ ರೇಡ್ ಮಾಡಿದ ಸಿಸಿಬಿ ಅಧಿಕಾರಿಗಳ ತಂಡಕ್ಕೆ ನಾಗಲಕ್ಷ್ಮಮ್ಮ ಅವರು ಆವಾಜ್ ಹಾಕಿದ್ದರು. ನೀವ್ಯಾರು? ಅಳಿಯ, ಮಗಳು ಇಲ್ಲದ ವೇಳೆ ಏಕೆ ಬಂದಿದ್ದೀರಿ ಎಂದು ಕಿರುಚಾಡಿದರು. ಇದರಿಂದ ಬೇಸತ್ತ ಅಧಿಕಾರಿಗಳು ಕೊನೆಗೆ ಮಹಿಳಾ ಅಧಿಕಾರಿಯನ್ನು ಕರೆಸಿ ನಾಗಲಕ್ಷ್ಮಮ್ಮರನ್ನ ಸಿಸಿಬಿ ವಶಕ್ಕೆ ಪಡೆದುಕೊಂಡರು. ಬಳಿಕ ಬೆಡ್ ರೂಂ, ಬಾತ್‍ರೂಮ್, ಗೋಡೆ, ಸಿಂಟೆಕ್ಸ್, ಸಂಪ್ ಎಲ್ಲಾ ಕಡೆ ಚಿನ್ನಕ್ಕಾಗಿ 8 ಗಂಟೆಗಳ ನಿರಂತರ ಶೋಧ ನಡೆಸಿದರು. ಇದರ ಜೊತೆಗೆ ಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ಕೊಂಡೊಯ್ದರು.

ಡೀಲ್ ನಡೆದ ತಾಜ್ ವೆಸ್ಟ್ ಎಂಡ್‍ನಲ್ಲಿ ಆಂಬಿಡೆಂಟ್ ಮಾಲೀಕ ಫರೀದ್ ಅವರನ್ನ ಸಿಸಿಬಿ ಪೊಲೀಸರು ಮಹಜರು ಮಾಡಿದಾಗ, ಅಲ್ಲಿ ನಡೆದ ಸಂಭಾಷಣೆ ಮಾಧ್ಯಮಗಳಿಗೆ ಲಭ್ಯವಾಗಿದೆ. ಫರೀದ್ ಮಹಜರು ವೀಡಿಯೋ ಮಾಧ್ಯಮಗಳಿಗೆ ಲೀಕ್ ಆಗಿರುವುದಕ್ಕೆ ಸಿಸಿಬಿ ಚೀಫ್ ಅಲೋಕ್ ಕುಮಾರ್ ಅಧಿಕಾರಿಗಳ ಮೇಲೆ ಗರಂ ಆದರು. ಅಲ್ಲದೇ ಅಲಿಖಾನ್ ನಿವಾಸಕ್ಕೆ ತೆರಳಿದ್ದ ತಂಡದ ಜೊತೆ ತುರ್ತು ಸಭೆ ನಡೆಸಿ, ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

alok copy

ಈ ವೇಳೆ ಅಧಿಕಾರಿಗಳಿಗೆ ಕೋರ್ಟ್‍ಗೆ ಹಾಜರು ಪಡಿಸುವ ಮುನ್ನ, ಯಾವುದೇ ದಾಖಲೆ ಸೋರಿಕೆ ಮಾಡುವಂತಿಲ್ಲ. ಆದರೂ ಸಹ ಇದು ಹೇಗೆ ಲೀಕ್ ಆಯ್ತು? ಕಣ್ಣಾ ಮುಚ್ಚಾಲೆ ನನ್ನ ಹತ್ತಿರ ನಡೆಯಲ್ಲ. ಹಗಲು-ರಾತ್ರಿ ಒದ್ದಾಡಿ ಮಾಡುತ್ತಿರುವ ಕೆಲಸವನ್ನು ಮುಗಿಸುವ ಯತ್ನ ಮಾಡುತ್ತಿದ್ದೀರಾ? ನಮ್ಮವರಲ್ಲದೇ ಬೇರೆ ಯಾರು ಮಾಧ್ಯಮಕ್ಕೆ ವಿಡಿಯೋ ಕೊಟ್ಟವರು? ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಬೆನ್ನಲ್ಲೆ, ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಮಾಹಿತಿ ಪಡೆದಿದ್ದು, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರೂ ಹೇಳಿಕೆ ಕೊಡಬಾರದೆಂದು ವಾರ್ನಿಂಗ್ ಕೊಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಹೀಗಾಗಿ ರೆಡ್ಡಿ ಆಪ್ತ ರಾಮುಲುಗೆ ಧರ್ಮಸಂಕಟ ಎದುರಾಗಿದೆ.

bjp highcommand warn

ಈ ಬಗ್ಗೆ ಕಾನೂಕು ಕ್ರಮ ತೆಗೆದುಕೊಳ್ಳುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದರ ಜೊತೆ ಬಿಜೆಪಿ ಎಂಎಲ್‍ಸಿ ರವಿಕುಮಾರ್ ಚಿತ್ರದುರ್ಗದಲ್ಲಿ ಮಾತನಾಡಿ, ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದರೆ, ಮೊಳಕಾಲ್ಮೂರು ಪರಾಜಿತ ಅಭ್ಯರ್ಥಿ ತಿಪ್ಪೇಸ್ವಾಮಿ ನನಗೆ ಟಿಕೆಟ್ ತಪ್ಪಿಸಿದ್ದೇ ರೆಡ್ಡಿ ಅಂತ ಕಿಡಿಕಾರಿದರು. ಇದು ರಾಜ್ಯ ಸರ್ಕಾರದ ಪಿತೂರಿ ಅಲ್ಲ. ಜನರ ದುಡ್ಡು ತಿಂದೋವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದೆ ಎಂದು ಸಂಸದ ಉಗ್ರಪ್ಪ ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *