– ರಾಜಿ, ಸಂಧಾನದ ಬಳಿಕವೂ ರಾಜಕೀಯ ರಾಡಿ
ಮೈಸೂರು: ಮಾಜಿ ಸಚಿವರಾದ ಸಾ.ರಾ ಮಹೇಶ್ ಮತ್ತು ಎಚ್ ವಿಶ್ವನಾಥ್ ನಡುವಿನ ಜಗಳ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇಬ್ಬರ ನಡುವೆ ರಾಜಿ ಸಂಧಾನವಾಗಿ ಇನ್ನೂ 20 ದಿನ ಕಳೆದಿಲ್ಲ. ಆಗಲೇ ಮತ್ತೆ ಏಟು-ಏದಿರೇಟು ಶುರುವಾಗಿದೆ. ಈ ಏಟು – ಏದಿರೇಟಿಗೆ ಇಂದು ಬೆಟ್ಟದ ಮೇಲಿನ ಚಾಮುಂಡಿ ತಾಯಿ ಸಾಕ್ಷಿಯಾಗಲಿದ್ದಾಳೆ.
ಸಾ.ರಾ ಮಹೇಶ್ ಮತ್ತು ವಿಶ್ವನಾಥ್ ಮೈಸೂರು ಭಾಗದ ಪ್ರಭಾವಿ ನಾಯಕರು. ಕೆಲ ದಿನಗಳ ಹಿಂದೆ ಇವರಿಬ್ಬರ ಆರೋಪ ಪ್ರತ್ಯಾರೋಪಗಳು ವೈಯಕ್ತಿಕ ವಿಚಾರವಾಗಿ ತಿರುಗಿ ಕೀಳು ಮಟ್ಟದ ಹೇಳಿಕೆಗಳು ಇಬ್ಬರು ನಡುವೆ ಶುರುವಾಗಿದ್ದವು. ನಂತರ ಇಬ್ಬರು ಎಚ್ಚೆತ್ತು ಪರಸ್ಪರ ಟೀಕೆ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದರು. ಕದನ ವಿರಾಮ ಘೋಷಿಸಿದ್ದರು. ಆದರೆ, ಇದೀಗ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮತ್ತೆ ಇಬ್ಬರ ನಡುವೆ ವಾಕ್ಸಮರ ಆರಂಭವಾಗಿದೆ.
Advertisement
Advertisement
ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಧ್ವನಿ ಎತ್ತಿದ ವಿಶ್ವನಾಥ್ ವಿರುದ್ಧ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ವಿಶ್ವನಾಥ್ ಆಣೆ ಪ್ರಮಾಣದ ವಿಚಾರ ಪ್ರಸ್ತಾಪ ಮಾಡಿದ್ದರು. ನನ್ನನ್ನು ಮಾರಿ ಕೊಂಡವನು ಅಂತ ಸಾರಾ ಮಹೇಶ್ ಆರೋಪಿಸುತ್ತಾರೆ. ನನ್ನನ್ನು ಖರೀದಿ ಮಾಡಿದವನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದರು. ಬುಧವಾರ ಮತ್ತೆ ಸಾ.ರಾ ಮಹೇಶ್, ವಿಶ್ವನಾಥ್ ತಮಗೆ ನೀಡಿದ್ದ ಸವಾಲು ಸ್ವೀಕರಿಸಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
Advertisement
Advertisement
ವಿಶ್ವನಾಥ್ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ ಅನ್ನುವುದಾದರೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ. ನಾನು ಬರುತ್ತೇನೆ ಎಂದು ಸಾ.ರಾ ಮಹೇಶ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಹುಣಸೂರು ಉಪಚುನಾವಣೆಯ ಟಿಕೆಟ್ ಒಳ ಒಪ್ಪಂದ ಆಗಿದೆ. ನಮ್ಮ ಜಿಲ್ಲೆಯವರು ಯಾರು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಇಂದು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ಆದರೆ ನನ್ನನ್ನು ಕೊಂಡುಕೊಂಡವನು ಸಾ.ರಾ ಮಹೇಶ್ ಜೊತೆ ಬರಲೇಬೇಕು ಎಂದು ತಾಕೀತು ಮಾಡಿದ್ದಾರೆ. ನಾನು ಕುರುಬ ಸಮುದಾಯದವನು ಎಂದು ಹೀಗೆ ಮನಬಂದಂತೆ ನನ್ನ ಮೇಲೆ ಆರೋಪ ಮಾಡ್ತಿದ್ದೀರಾ ಅಂತ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ.
ಸದ್ಯ ಎಲ್ಲರ ಚಿತ್ತ ಇಂದು ಚಾಮುಂಡಿ ಬೆಟ್ಟದದಲ್ಲಿ ನಡೆಯುವ ವಿದ್ಯಮಾನಗಳ ಕಡೆ ನೆಟ್ಟಿದೆ. ಇಂದು ಇಬ್ಬರ ಆಣೆ ಪ್ರಮಾಣಕ್ಕೆ ಸಮಯ ನಿಗದಿಯಾಗಿದ್ದು, ಇಬ್ಬರು ನಾಡ ದೇವತೆಯ ಸನ್ನಿಧಿಯಲ್ಲಿ ಯಾವ ರೀತಿ ಆಣೆ ಪ್ರಮಾಣ ಮಾಡುತ್ತಾರೆ ಎನ್ನುವುದೇ ಕುತೂಹಲವಾಗಿದೆ.