Connect with us

Bengaluru City

ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

Published

on

– ಬಳ್ಳಾರಿ ಅಭ್ಯರ್ಥಿ ಆಯ್ಕೆ ಇನ್ನು ಕಗ್ಗಂಟು

ಬೆಂಗಳೂರು: ಎರಡು ವಿಧಾನಸಭಾ, ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಕದನ ಇಂದಿನಿಂದ ರಂಗೇರಲಿದೆ. ತೀರ ಪ್ರಯಾಸದಿಂದ ಮೂರು ಪಕ್ಷಗಳು ಮಂಡ್ಯ, ಶಿವಮೊಗ್ಗ, ರಾಮನಗರ, ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಇಂದು ಕೆಲ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಗಣಿದಣಿಗಳ ಕೋಟೆ ಬಳ್ಳಾರಿಯಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಆಯ್ಕೆ ಆಗಿಲ್ಲ. ಸಿದ್ದರಾಮಯ್ಯ ಒಲವು ವಿಎಸ್ ಉಗ್ರಪ್ಪ ಪರ ಇದ್ದರೆ, ನಾಗೇಂದ್ರ ತಮ್ಮ ಸೋದರ ವೆಂಕಟೇಶ್ ಪ್ರಸಾದ್‍ಗೆ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿದ್ದಾರೆ. ಇತ್ತ ಜಾರಕಿಹೊಳಿ ಬ್ರದರ್ಸ್ ಒಲವು ಸಂಬಂಧಿ ದೇವೇಂದ್ರಪ್ಪ ಪರ ಇದೆ. ಯಾವುದೇ ಕ್ಷಣದಲ್ಲಿ ಕೈ ಅಭ್ಯರ್ಥಿ ಹೆಸರು ಘೋಷಣೆ ಆಗೋ ಸಾಧ್ಯತೆ ಇದೆ.

ಇತ್ತ ಬಳ್ಳಾರಿ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜೆ ಶಾಂತಾ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದು, ಟಿಕೆಟ್ ಆಕ್ಷಾಂಕಿಯಾಗಿದ್ದ ಡಾ. ಶ್ರೀನಿವಾಸ್ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂಬವುದು ಈ ಕೆಳಗಿನಂತಿದೆ.

* ರಾಮನಗರ ವಿಧಾನಸಭಾ ಕ್ಷೇತ್ರ
ಅನಿತಾ ಕುಮಾರಸ್ವಾಮಿ, ಜೆಡಿಎಸ್ V/S ಎಲ್.ಚಂದ್ರಶೇಖರ್, ಬಿಜೆಪಿ

* ಶಿವಮೊಗ್ಗ ಲೋಕಸಭಾ ಕ್ಷೇತ್ರ
ಮಧು ಬಂಗಾರಪ್ಪ, ಜೆಡಿಎಸ್ V/S ಬಿ.ವೈ ರಾಘವೇಂದ್ರ, ಬಿಜೆಪಿ

* ಮಂಡ್ಯ ಲೋಕಸಭಾ ಕ್ಷೇತ್ರ
ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ V/S ಡಾ.ಸಿದ್ದರಾಮಯ್ಯ, ಬಿಜೆಪಿ

* ಜಮಖಂಡಿ ವಿಧಾನಸಭಾ ಕ್ಷೇತ್ರ
ಆನಂದ ನ್ಯಾಮಗೌಡ, ಕಾಂಗ್ರೆಸ್ V/S ಶ್ರೀಕಾಂತ್ ಕುಲಕರ್ಣಿ, ಬಿಜೆಪಿ

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ತಮ್ಮ ಪತಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಜೊತೆ ಆಗಮಿಸಿ, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 1.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಜೆಪಿಯ ಚಂದ್ರಶೇಖರ್ ಬೆಳಗ್ಗೆ 10 ಗಂಟೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ಮಾಜಿ ಡಿಸಿಎಂ ಅಶೋಕ್, ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಾಥ್ ನೀಡಲಿದ್ದಾರೆ.

ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬಿ. ವೈ. ರಾಘವೇಂದ್ರ ಬೆಳಗ್ಗೆ 9.15ಕ್ಕೆ ಹರಕೆರೆಥಿ ಶ್ರೀರಾಮೇಶ್ವರ ದೇವಸ್ಥಾನ, ಬೆಳಗ್ಗೆ 9.30ಕ್ಕೆ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ, ಬೆಳಗ್ಗೆ 9.45ಕ್ಕೆ ತಿಪ್ಪಾಜೋಯ್ಸ್ ಕಲೋನಿಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ. ಮಧು ಬಂಗಾರಪ್ಪ ಕೂಡ ಮಧ್ಯಾಹ್ನ 12 ಗಂಟೆ ಸುಮಾರಿಗೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಇದೆ.

ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯದಲ್ಲಿ ಜೆಡಿಎಸ್‍ನ ಶಿವರಾಮೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವರಾಮೇಗೌಡ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆಯಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *