ಎಐಸಿಸಿ ಅಧ್ಯಕ್ಷರಿಗೆ ಶರಣಾದ ಸಮ್ಮಿಶ್ರ ಸರ್ಕಾರ!

Public TV
3 Min Read
rahul gandhi copy

ಬೆಂಗಳೂರು: ರಫೆಲ್ ಹಗರಣದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಬರುತ್ತಿದ್ದು, ಕೆಕೆ ರೋಡ್, ಸಿಟಿಓ ಜಂಕ್ಷನ್ ಮತ್ತು ಕಬ್ಬನ್ ಪಾರ್ಕ್ ಜಂಕ್ಷನ್ ಅಲ್ಲಿ ಪಾರ್ಕಿಂಗ್ ನಿಷೇಧಿಸಿದ್ದಾರೆ.

ಸಿಟಿಓ ಜಂಕ್ಷನ್ ನಲ್ಲಿ ಎಚ್‍ಎಎಲ್ ಅಧಿಕಾರಿಗಳ ಜೊತೆ ರಾಹುಲ್ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3:15 ಕ್ಕೆ ಪ್ರಾರಂಭವಾಗುವ ಸಂವಾದ ಕಾರ್ಯಕ್ರಮಕ್ಕೆ ಮಧ್ಯಾಹ್ನ ಎರಡು ಗಂಟೆಯಿಂದಲೇ ಸಂಚಾರ ಸ್ಥಗಿತ ಮಾಡುವ ಪ್ಲಾನ್ ನಲ್ಲಿ ಕೂಡ ಇದ್ದಾರೆ. ರಾಹುಲ್ ಗಾಂಧಿ ನಡೆಸುತ್ತಿರುವ ಸಂವಾದಕ್ಕೆ ಸಾಕಷ್ಟು ವಿಐಪಿಗಳು ಬರುವುದರಿಂದ ಕೆಕೆ ರೋಡ್, ಸಿಟಿಓ ಜಂಕ್ಷನ್ ಮತ್ತು ಕಬ್ಬನ್ ಪಾರ್ಕ್ ಜಂಕ್ಷನ್ ಅಲ್ಲಿ ಪಾರ್ಕಿಂಗ್ ನಿಷೇಧ ಮಾಡಿದ್ದಾರೆ. ಇದರಿಂದ ವಾಹನ ಸಂಚಾರರು ಇಂದು ಪರದಾಡುತ್ತಿದ್ದಾರೆ.

rahul

ಇದೆಲ್ಲವನ್ನೂ ನೋಡಿದರೆ ಯಾರನ್ನೋ ಮೆಚ್ಚಿಸುವುದಕ್ಕೆ ಹೋಗಿರುವ ವಿಐಪಿ ಮೋಹದ ಡಿಸಿಎಂ ಸಾಹೇಬರು ಜನರನ್ನು ಮತ್ತೆ ಹಿಂಸೆಗೆ ಸಿಲುಕಿಸುತ್ತಿದ್ದಾರೆ. ವಿಐಪಿ ಮೋಹದಲ್ಲಿ ಸಿಲುಕಿರುವ ಪರಮೇಶ್ವರ್ ಅವರಿಗೆ ಜನ ಈಗಾಗಲೇ ಆಕ್ರೋಶ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಯವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದೆಲ್ಲದರ ನಡುವೆ ಮತ್ತೊಂದು ವಿರೋಧ ಕೇಳಿ ಬರುತ್ತಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಬಂದರೆ ಊರ ಹೊರಗಿನ ಮಾದಾಪುರದಲ್ಲಿ ಅನುಮತಿ ನೀಡುವರಿಗೆ ರಾಹುಲ್ ಗಾಂಧಿ ವಿಶೇಷನಾ ಅಂತ ಕೆಂಡ ಕಾರುತ್ತಿದ್ದಾರೆ.

rahul 1

ರಾಹುಲ್ ಗಾಂಧಿ ಕಾರ್ಯಕ್ರಮದಿಂದ ಯಾರಿಗೆ ತೊಂದರೆ
ಎಂ ಜಿ ರೋಡ್ – ಕಾರ್ಪೋರೇಷನ್ ಸರ್ಕಲ್
ಎಂಜಿ ರೋಡ್ – ಚಾಮರಾಜಪೇಟೆ
ಎಂಜಿ ರೋಡ್ – ಕೆ ಆರ್ ಪುರಂ
ಎಂ ಜಿ ರೋಡ್ – ಕೋರಮಂಗಲ
ಎಂ ಜಿ ರೋಡ್ – ಇಂದಿರಾನಗರ
ಕೋರಮಂಗಲ – ವಿಧಾನಸೌದ

ಕಾರ್ಯಕ್ರಮವೇನು?:
‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‍ಎಎಲ್ ಕೊಡುಗೆ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಹೆಚ್ ಎಎಲ್ ನ ನಿವೃತ್ತ ಹಾಗೂ ಹಾಲಿ ಸಿಬ್ಬಂದಿ ಸೇರಿದಂತೆ ಸುಮಾರು ನೂರು ಜನರೊಂದಿಗೆ ರಾಹುಲ್ ಗಾಂಧಿ ಒಂದರಿಂದ ಎರಡು ಗಂಟೆಗಳ ಕಾಲ ಸಂವಾದ ನಡೆಸಲಿದ್ದಾರೆ.

rahul 2

ಕೇಂದ್ರ ಸರ್ಕಾರದ ರಫೆಲ್ ಯುದ್ಧ ವಿಮಾನ ಖರೀದಿ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಿದೆ. ಎಚ್‍ಎಎಲ್ ಗೆ ದಕ್ಕಬೇಕಿದ್ದ ಈ ಖರೀದಿ ಟೆಂಡರ್, ಬೇರೆ ದೇಶದ ಖಾಸಗಿ ಕಂಪನಿ ಪಾಲಾಗಿದೆ. ರಿಲಾಯನ್ಸ್ ಸಂಸ್ಥೆ ಇದರ ಪಾಲುದಾರನಾಗಿದ್ದು, ಯುದ್ಧ ವಿಮಾನ ಸಿದ್ಧಪಡಿಸುವ ಅನುಭವ ಇಲ್ಲದ ಕಂಪನಿಗೆ ಡೀಲ್ ನೀಡಲಾಗಿದೆ. ಅಲ್ಲದೇ ಇದರ ಮೊತ್ತವನ್ನು ಕೂಡ ತಿಳಿಸುತ್ತಿಲ್ಲ. ಎಲ್ಲವನ್ನೂ ಗುಪ್ತವಾಗಿಡಲಾಗಿದೆ. ಇಲ್ಲೊಂದು ದೊಡ್ಡ ವಂಚನೆಯಾಗಿದೆ ಎಂದು ರಾಹುಲ್ ಗಾಂಧಿ ನಿರಂತರ ಆರೋಪ ಮಾಡುತ್ತ ಬಂದಿದ್ದರು.

rahul 3

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುವ ಉದ್ದೇಶ ಕಾಂಗ್ರೆಸ್‍ನದ್ದು ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಇಂದಿನ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದು, ಎಚ್‍ಎಎಲ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ತಮಗೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಎಲ್ಲಾ ಮಾಹಿತಿ ರಾಹುಲ್ ಗಾಂಧಿಗೆ ಒದಗಿಸಲಾಗಿದೆ. ಅದನ್ನು ಆಧರಿಸಿ ಅವರು ಸಂವಾದ ನಡೆಸುವ ಸಾಧ್ಯತೆ ಇದೆ. ಮಧ್ಯಾಹ್ನ 1.55ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಹುಲ್ ಗಾಂಧಿ ನೇರವಾಗಿ ಕುಮಾರಕೃಪ ಅತಿಥಿ ಗೃಹಕ್ಕೆ ಅಗಮಿಸುತ್ತಾರೆ. 2.30ಕ್ಕೆ ಅಗಮಿಸುವ ಅವರು ಪಕ್ಷದ ಆಯ್ದ ಕೆಲವು ನಾಯಕರ ಜೊತೆ ಸಭೆ ನಡೆಸುತ್ತಾರೆ. ಸಂಜೆ 3.30ಕ್ಕೆ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5ರವರೆಗೆ ಇಲ್ಲಿದ್ದು, 6 ಗಂಟೆಗೆ ಮರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *