ದೇವರಿಗೆ ಚೂಡಿದಾರ ತೊಡಿಸಿ ಅಲಂಕಾರ ಮಾಡಿದ್ದ ಅರ್ಚಕರು ಅಮಾನತು

Public TV
1 Min Read
GOD DRESS

ಚೆನ್ನೈ: ಮೈಲಾಡುತುರೈ ಜಿಲ್ಲೆಯ ದೇವಾಲಯದ ದೇವಿ ವಿಗ್ರಹಕ್ಕೆ ಚೂಡಿದಾರ ತೊಡಿಸಿ ಅಲಂಕಾರ ಮಾಡಿದ್ದ ಇಬ್ಬರು ಅರ್ಚಕರನ್ನು ಅಮಾನತು ಮಾಡಲಾಗಿದೆ.

ಮಯೂರನಾಥಸ್ವಾಮಿ ದೇಗುಲದ ಅಬಯಂಬೈಗೈ ದೇವತೆ ವಿಗ್ರಹಕ್ಕೆ ಇಬ್ಬರು ಅರ್ಚಕರು ಚೂಡಿದಾರ ತೊಡಿಸಿದ್ದು, ಈಗ ಅಲಂಕೃತ ದೇವಿಯ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಪ್ರತಿ ಶುಕ್ರವಾರದಂದು ದೇವಿಗೆ ಬಣ್ಣ ಬಣ್ಣದ ಉಡುಪಿನಿಂದ ಅಲಂಕರಿಸಲಾಗುತ್ತದೆ. ಅದೇ ರೀತಿ ಫೆಬ್ರವರಿ 2 ರಂದು ಇಬ್ಬರು ಅರ್ಚಕರು ದೇವತೆ ವಿಗ್ರಹಕ್ಕೆ ಮಹಿಳೆಯರು ಧರಿಸುವ ಚೂಡಿದಾರ್ ತೊಡಿಸಿದ್ದು, ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ದುಪ್ಪಟ್ಟದಿಂದ ಅಲಂಕರಿಸಿದ್ದರು. ದೇವಿಯ ಅಲಂಕಾರ ಬದಲಾಗಿದ್ದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ದೇವತೆಗೆ ಸೀರೆ ಹೊರತಾಗಿ ಇತರ ಉಡುಪುಗಳಿಂದ ಅಲಂಕರಿಸುವುದು ದೇವಸ್ಥಾನ ನಿಯಮಗಳ ಉಲ್ಲಂಘನೆಯಾಗುತ್ತದೆ. ಆದರೆ ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿ ದೇವಿಗೆ ಚೂಡಿದಾರ್ ತೊಡಿಸಿರುವ ಇಬ್ಬರು ಅರ್ಚಕನ್ನು ದೇವಾಸ್ಥಾನದ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ದೇವಿಗೆ ಚೂಡಿದಾರ್ ತೊಡಿಸಿದ ಇಬ್ಬರು ಪುರೋಹಿತರನ್ನು ಅಮಾನತು ಗೊಳಿಸಿದ್ದೇವೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ದೇವಾಲಯಕ್ಕೆ 1,000 ವರ್ಷಗಳ ಇತಿಹಾಸ ಇದೆ. ಹಳೆಯ ದೇವಾಲಯದ ಭಕ್ತರು ಮತ್ತು ಹಿರಿಯ ಪುರೋಹಿತರ ಟೀಕೆಗಳ ನಂತರ ಮಠದ ಆಡಳಿತವು ಪುರೋಹಿತರನ್ನು ವಜಾ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *