ದಾವಣಗೆರೆ: ಸಾಲ ಮರುಪಾವತಿಸುವಂತೆ ಮೈಕ್ರೋ ಫೈನಾನ್ಸ್ (Micro Finance) ಹಾಗೂ ಸ್ವಸಹಾಯ ಸಂಘಗಳ ಕಿರುಕುಳಕ್ಕೆ ಬೇಸತ್ತು ತಾಯಿ ಹಾಗೂ ಅಂಗವಿಕಲೆ ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ನಗರದ ಬಳಿ ಇರುವ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.
ಗಂಗನರಸಿ ಗ್ರಾಮದ ಸುವರ್ಣಮ್ಮ (56), ಅಂಗವಿಕಲ ಮಗಳು ಗೌರಮ್ಮ (26) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಸುವರ್ಣಮ್ಮ, ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹವಾಗಿದ್ದು, ಅಂಗವಿಕಲೆಯಾದ ಗೌರಮ್ಮ ತಾಯಿಯೊಂದಿಗೆ ನೆಲೆಸಿದ್ದರು. ಕೂಲಿ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದ ಸುವರ್ಣಮ್ಮ, ಸಾಲದ ಹೊರೆಗೆ ಬಳಲಿದ್ದರು ಎನ್ನಲಾಗುತ್ತಿದ್ದು, ಮೈಕ್ರೊ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು. 2 ಸಾಲಕ್ಕೆ ವಾರಕ್ಕೊಮ್ಮೆ ಹಾಗೂ 1 ಸಾಲಕ್ಕೆ ತಿಂಗಳ ಕಂತುಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಸಾಲದ ಕಂತು ಸರಿಯಾಗಿ ಪಾವತಿಸಲು ಕಷ್ಟಪಡುತ್ತಿದ್ದರು. ಇದನ್ನೂ ಓದಿ: ಕಲಬುರಗಿ | ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಕಾಲ್ತುಳಿತ – ಮಹಿಳೆ ಸಾವು
ಸಾಲಗಾರರ ಕಾಟ ತಾಳಲಾರದೆ ಇಂದು ತುಂಗಾಭದ್ರಾ ನದಿಗೆ ನಿರ್ಮಿಸಿದ ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಮುಡಾ ಹಗರಣ | ಸಿಎಂ ಪತ್ನಿಗೆ ಹೈಕೋರ್ಟ್ ನೋಟಿಸ್