ಮಡಿಕೇರಿ: ಮೈಸೂರು (Mysuru) ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು (Tippu) ಪ್ರತಿಮೆ ಚರ್ಚೆ ಹಿನ್ನೆಲೆ, ಟಿಪ್ಪುವಿಗೂ ಮೈಸೂರಿಗೂ ಸಂಬಂಧವಿಲ್ಲ. ಮೈಸೂರಿನಲ್ಲಿ ಮಹಾರಾಜರು ಮಾತ್ರವೇ ಇರಬೇಕು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೆ ನೀಡಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಬೆಂಗಳೂರು ಕೆಂಪೇಗೌಡರ ದೂರದೃಷ್ಟಿಯ ಫಲ ಅವರಿಂದ ಬೆಂಗಳೂರು ಸ್ಥಾಪನೆಯಾಗಿದೆ. ಟಿಪ್ಪು ಸುಲ್ತಾನ್ ಪ್ರತಿಮೆ ಮಾಡಿದರೆ ಏನು ನೆನಪಾಗುತ್ತೆ? ಜನರಿಗೆ ಅವರ ಬಗ್ಗೆ ಏನು ಹೇಳಬೇಕು? ಟಿಪ್ಪು ಕೊಡವರ ಹತ್ಯಾಕಾಂಡ ಮಾಡಿದರ ಬಗ್ಗೆ ಹೇಳಬೇಕಾ? ಅಲ್ಲದೆ ಕನ್ನಡವನ್ನು ಕಗ್ಗೊಲೆ ಮಾಡಿದ ವ್ಯಕ್ತಿಯ ಪ್ರತಿಮೆ ಮಾಡುತ್ತೀರಾ? ಎಂದು ಆಕ್ರೋಶ ಹೊರಹಾಕಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಟಿಪ್ಪು ಜಯಂತಿ ಮಾಡಿಸಿದ್ದರು. ಇದು ಅರಣ್ಯ ಇಲಾಖೆಯು ವೀರಪ್ಪನ್ ಜಯಂತಿ ಮಾಡಿದಂತಾಗುತ್ತದೆ. ಟಿಪ್ಪು ಕ್ರೌರ್ಯಕ್ಕೆ ದ್ಯೋತಕವಾಗಿದ್ದಾನೆ. ಟಿಪ್ಪು ರಾಕೆಟ್ ಹಾರಿಸಲೇ ಇಲ್ಲ. ಯುದ್ಧದಲ್ಲಿ ಟಿಪ್ಪು ರಾಕೆಟ್ ಬಳಕೆ ಮಾಡಿದ ಉದಾಹರಣೆಯೇ ಇಲ್ಲ. ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಟಿಪ್ಪು ವೈಭವೀಕರಣ ಮಾಡಬೇಡಿ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್ ಕಿಡಿ
ಟಿಪ್ಪು ಯಾವ ಹುಲಿ ಜತೆ ಹೋರಾಟ ಮಾಡಿದ್ದಾನೆ? ಮನುಷ್ಯ ಹುಲಿ ಜತೆ ಹೋರಾಟ ಮಾಡಲು ಸಾಧ್ಯವೇ? ಹೈದರಾಲಿ ಯುದ್ಧ ಮಾಡಿದ ಉದಾಹರಣೆಯಿದೆ. ಟಿಪ್ಪು ಯಾವ ಯುದ್ಧದಲ್ಲಿ ಹೋರಾಡಿದ್ದಾನೆ? ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮನೆಯಿಂದ ಹೊರಗಡೆಯೇ ಬರಲಿಲ್ಲ. ಕಟ್ಟು ಕಥೆಗಳ ಮೂಲಕ ಟಿಪ್ಪುನನ್ನು ಕನ್ನಡದ ಹೋರಾಟಗಾರ ಎಂದು ಹೇಳುವುದನ್ನು ನಿಲ್ಲಿಸಿ. ತನ್ವೀರ್ ಸೇಠ್ ಅವರು ಟಿಪ್ಪು ಪ್ರತಿಮೆ ಮಾಡುವ ಬದಲು ಅಬ್ದುಲ್ ಕಲಾಂ ಅವರ ಪ್ರತಿಮೆ ಮಾಡಿ. ಇದನ್ನು ಜನರು ಒಪ್ಪುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರು. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ