5 ಹುಲಿಗಳ ನಿಗೂಢ ಸಾವು – ವಿಷ ಹಾಕಿದ್ದ ದುಷ್ಕರ್ಮಿ ಸೇರಿ ಐವರು ವಶಕ್ಕೆ

Public TV
2 Min Read
Tigers Death Case

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (MM Hills) 5 ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಕಿಡಿಗೇಡಿಗಳು ಸತ್ತ ಹಸುವಿನ ಕಳೇಬರದಲ್ಲಿ ವಿಷವಿಕ್ಕಿ ತಾಯಿ ಹಾಗೂ 4 ಮರಿ ಹುಲಿಗಳನ್ನು (Tigers) ಕೊಂದಿರೋದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಖಚಿತಪಡಿಸಿದ್ದಾರೆ. ಈ ನಡುವೆ ತನಿಖೆ ಚುರುಕುಗೊಳಿಸಿದ್ದ ಅರಣ್ಯಾಧಿಕಾರಿಗಳು ಹುಲಿಗಳಿಗೆ ವಿಷ ಹಾಕಿದ್ದ ದುಷ್ಕರ್ಮಿಯೊಬ್ಬ ಸೇರಿ 6 ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

Tigers Death Case 3

ಹುಲಿ ದಾಳಿಯಿಂದ ಕೋಪಗೊಂಡ ಮಾಲೀಕ ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಹಸುವಿನ ಕಳೆಬರಕ್ಕೆ ವಿಷ (Poisoned Cow) ಸಿಂಪಡಣೆ ಮಾಡಿದ್ದ. ಈ ಕೃತ್ಯದಲ್ಲಿ ಶಿವಣ್ಣನ ಮಗನೂ ಭಾಗಿಯಾಗಿದ್ದ ಎನ್ನಲಾಗಿದೆ. ವಿಷ ಸಿಂಪಡಿಸಿದ್ದ ಕಳೆಬರವನ್ನು ತಿಂದು ಹುಲಿಗಳು ಸಾವನ್ನಪ್ಪಿರುವುದಾಗಿ ಉನ್ನತ ಮೂಲಗಳು ʻಪಬ್ಲಿಕ್‌ ಟಿವಿʼಗೆ ತಿಳಿಸಿವೆ. ಇನ್ನೂ ಆರೋಪಿ ಶಿವಣ್ಣನನ್ನ ವಶಕ್ಕೆ ಪಡೆಯುತ್ತಿದ್ದಂತೆ ಮಗ ಎಸ್ಕೇಪ್‌ ಆಗಿದ್ದಾನೆ.

ಸದ್ಯ ಗಾಜನೂರು ಗ್ರಾಮದ ಅರಣ್ಯ ಇಲಾಖೆ ವಿಶ್ರಾಂತಿ ಕೊಠಡಿಯಲ್ಲಿ ಆರೋಪಿಯನ್ನಿರಿಸಲಾಗಿದೆ. ಶಿವಣ್ಣ ಜೊತೆಗೆ ಅದೇ ಗ್ರಾಮದ ಐವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವು: ಖಚಿತ ಪಡಿಸಿದ ಸಿಸಿಎಫ್ ಹೀರಾಲಾಲ್

Tigers Death Case 2

ಏನಿದು ಘಟನೆ?
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಮೀಣ್ಯಂ ವಲಯದಲ್ಲಿ ಐದು ಹುಲಿಗಳು ಮೃತಪಟ್ಟಿರುವ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು. ಹುಲಿಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ದೌಡಾಯಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ವಿಷಪ್ರಾಶನದಿಂದಲೇ ಸಾವು ಎಂದು ಖಚಿತವಾಯ್ತು. ಮರಣೋತ್ತರ ಪರೀಕ್ಷೆ ಬಳಿಕ ಅಗ್ನಿಸ್ಪರ್ಶದ ಮೂಲಕ ಹುಲಿ, ಹಸು ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ಹುಲಿಗಳ ದೇಹದ ಪ್ರಮುಖ ಅಂಗಾಂಗ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದೆ. ಮೂರು ಗುಂಪುಗಳಲ್ಲಿ ಮಾದರಿ ಸಂಗ್ರಹಿಸಿದ್ದು, ಪ್ರತ್ಯೇಕವಾಗಿ ಮೂರು ಲ್ಯಾಬ್‌ಗಳಿಗೆ ಸ್ಯಾಂಪಲ್‌ಗಳನ್ನು ರವಾನಿಸಲಾಗಿದೆ.

ಇನ್ನೂ ಗಾಜನೂರು, ಕೊಪ್ಪ ಹಾಗೂ ಮೀಣ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ತಕ್ಕ ಕ್ರಮ ಆಗುತ್ತೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಚಾ.ನಗರ| ಹುಲಿಗಳು ಸತ್ತ 10 ಹೆಜ್ಜೆ ದೂರದಲ್ಲಿಯೇ ಹಸು ಕಳೇಬರ ಪತ್ತೆ- ವಿಷಪ್ರಾಶನ ಶಂಕೆ

Tiger deaths in M.M. Hills Case 5 tigers died due to poisoning CCF Hiralal confirms

ವನ್ಯಜೀವಿ ತಜ್ಞ ಕೃಪಾಕರ್ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿ ಹುಲಿ ದಾಳಿಗೆ ಜಾನುವಾರುಗಳು ಬಲಿಯಾದಾಗ ರೈತರಿಗೆ ಸರ್ಕಾರದಿಂದ ಸರಿಯಾದ ಪರಿಹಾರ ಸಿಗಲ್ಲ. 25-30 ವರ್ಷದಲ್ಲಿ ಹುಲಿಗೆ ವಿಷ ಹಾಕಿ ಕೊಂದಿದ್ದು ಇಲ್ಲವೇ ಇಲ್ಲ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಬಳಿಕ ಮಾತನಾಡಿ ಯಾರೇ ಈ ಕೃತ್ಯ ಮಾಡಿದ್ದರೂ ಕ್ರಮ ಕೈಗೊಳ್ತೇವೆ. ಮುಂದಿನ ದಿನಗಳಲ್ಲಿ ಗಸ್ತು ಹೆಚ್ಚಳ ಮಾಡ್ತೇವೆ. ಡ್ರೋನ್, ಸ್ಯಾಟಲೈಟ್ ಚಿತ್ರ ಸೇರಿ ಆಧುನಿಕ ಉಪಕರಣಗಳ ಬಳಕೆ ಮಾಡಿಕೊಳ್ಳಲಾಗುತ್ತದೆ. ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ಇದ್ದರೆ ತನಿಖೆಯಲ್ಲಿ ಬಹಿರಂಗವಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವು – ತನಿಖೆಗೆ ಈಶ್ವರ ಖಂಡ್ರೆ ಆದೇಶ

Share This Article