ಮಂಗಳೂರು/ ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕ ಕೇವಲ 15 ದಿನಗಳಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ.
ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ‘ರಾಣಿ’ ಹುಲಿ 5 ಮರಿಗಳಿಗೆ ಜನ್ಮ ನೀಡಿದೆ. 8 ವರ್ಷದ ರಾಯಲ್ ಬೆಂಗಾಲಿ ಟೈಗರ್ ರಾಣಿ ಮೂರು ವಾರಗಳ ಹಿಂದಯೇ ಜನ್ಮ ನೀಡಿರುವ ಮರಿಗಳ ಪೈಕಿ 3 ಹೆಣ್ಣು ಹಾಗೂ 2 ಗಂಡು ಆಗಿವೆ. ಈ ಐದು ಮರಿಗಳು ಆರೋಗ್ಯದಿಂದಿವೆ ಎಂದು ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ವಿಶ್ವ ಹುಲಿ ದಿನವಾದ ಜುಲೈ 29ರಂದು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶವು ಟಾಪ್ ಒನ್ ಸ್ಥಾನಕ್ಕೆ ಏರಿತ್ತು. ಹೀಗಾಗಿ 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈಗ ಕರ್ನಾಟಕದ ಹುಲಿಗಳ ಸಂಖ್ಯೆ 524+5 ಸೇರಿ 529 ಆಗಿದೆ. ಈ ಮೂಲಕ ಕರ್ನಾಟಕ ಮತ್ತೆ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ.
Advertisement
Karnataka: Rani, the Royal Bengal tigress gave birth to five healthy cubs three weeks ago at Pilikula Biological Park in Mangaluru. pic.twitter.com/exjxu4miJu
— ANI (@ANI) September 1, 2019
Advertisement
ಹಿಂದಿನ ವರದಿ ಹೀಗಿತ್ತು:
ಭಾರತದಲ್ಲಿ 2018ರ 4ನೇ ಹುಲಿ ಗಣತಿಯ ಅನ್ವಯ 2967 ಹುಲಿಗಳು ಇರುವುದಾಗಿ ವರದಿಯಿಂದ ತಿಳಿದು ಬಂದಿತ್ತು. ಇದರಲ್ಲಿ ಕರ್ನಾಟಕದ ಹುಲಿಗಳ ಸಂಖ್ಯೆ 524 ಎಂದು ಲೆಕ್ಕ ಹಾಕಲಾಗಿತ್ತು. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
Advertisement
2006ರಿಂದ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು 2018ರಲ್ಲಿ ನಾಲ್ಕನೇ ಸಮೀಕ್ಷೆ ನಡೆಸಲಾಗಿತ್ತು. ಪ್ರಸಕ್ತ ಸಾಲಿನ ಸಮೀಕ್ಷೆಯನ್ನು ಸುಮಾರು 15 ತಿಂಗಳುಗಳ ಕಾಲ ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿನ 3,81,400 ಚ.ಕಿ.ಮೀ. ಜಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸುಮಾರು 26,760 ಕ್ಯಾಮೆರಾ ಬಳಸಿ ವನ್ಯಜೀವಿ ಅಧ್ಯಯನಕಾರರು 3.5 ಕೋಟಿ ಚಿತ್ರಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ತಯಾರಿಸಲಾಗಿದೆ. ಅಂದಾಜು ಶೇ.83 ರಷ್ಟು ಹುಲಿಗಳ ಸಂಖ್ಯೆಯನ್ನು ಚಿತ್ರಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿತ್ತು.
2006ರ ವರದಿಯಲ್ಲಿ 1,441 ಹುಲಿಗಳಿದ್ದರೆ, 2010ರಲ್ಲಿ 1,706ಕ್ಕೆ ಏರಿಕೆಯಾಗಿತ್ತು. 2014ರ ವರದಿಯಲ್ಲಿ 2026 ಹುಲಿಗಳಿದ್ದವು. ಕೆಲವು ಅಂಶಗಳು ವರದಿಯಲ್ಲಿ ಬಹಿರಂಗವಾಗಿದ್ದು, ಹುಲಿಗಳ ಸಂತತಿಗೆ ಭಾರತಕ್ಕಿಂತ ಉತ್ತಮ ವಾತಾವರಣ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಅಖಿಲ ಭಾರತ ಹುಲಿ ಜನಗಣತಿ ವರದಿಯಲ್ಲಿ ತಿಳಿಸಲಾಗಿತ್ತು. 2022ಕ್ಕೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಸೆಂಟ್ ಪಿಟರ್ಸ್ ಬರ್ಗ್ ನಿರ್ಧರಿಸಿತ್ತು. ಆದರೆ, ಈ ಗುರಿಯನ್ನು ನಾಲ್ಕು ವರ್ಷಗಳಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ವರದಿ ಬಿಡುಗಡೆ ವೇಳೆ ತಿಳಿಸಿದ್ದರು.