ಚಾಮರಾಜನಗರ: ಬಂಡೀಪುರದಲ್ಲಿ (Bandipur) ಹುಲಿಯೊಂದು (Tiger) ಉರುಳಿಗೆ ಸಿಲುಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಭೀಮನಬೀಡು ಗ್ರಾಮದ ಮಾದೇಶ್ ಅಲಿಯಾಸ್ ಜಿಮ್ಮಿ ಬಂಧಿತ ಆರೋಪಿ. ಈತ ಮದ್ದೂರು ಅರಣ್ಯ ವಲಯದಲ್ಲಿ ಹುಲಿಗೆ ಉರುಳು ಹಾಕಿದ್ದ. ಆ ಉರುಳಿಗೆ ಹುಲಿ ಸಿಲುಕಿ ಸಾವನ್ನಪ್ಪಿತ್ತು. ಹಿಂದೆ ಕೂಡ ಆರೋಪಿ ವಿರುದ್ಧ ಉರುಳು ಹಾಕಿದ್ದ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು
ಬಂಡೀಪುರ ಹುಲಿ ಸಂರಕ್ಷಿತ (Bandipur Tiger Reserve) ಪ್ರದೇಶದಲ್ಲಿ ಇತ್ತೀಚೆಗೆ ಉರುಳಿಗೆ ಸಿಲುಕಿ ಎರಡು ವರ್ಷದ ಹುಲಿ ಮೃತಪಟ್ಟಿತ್ತು. ಇದೇ ವಲಯದಲ್ಲಿ ಆನೆಯ ಕಳೇಬರವೂ ಪತ್ತೆಯಾಗಿದ್ದು, ಆನೆಯ ಎರಡೂ ದಂತಗಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆನೆಯ ದಂತಗಳು ಹೇಗೆ ನಾಪತ್ತೆಯಾದವು? ಕಾಡಿನೊಳಗೆ ಆನೆ ಮೃತಪಟ್ಟ ಬಳಿಕ ದಂತಗಳನ್ನು ಯಾರಾದರೂ ಕದ್ದೊಯ್ದರೇ? ಅಥವಾ ಕಳೇಬರ ಪತ್ತೆಯಾಗುವ ಮೊದಲೇ ಕಳ್ಳಬೇಟೆ ನಡೆದಿತ್ತೇ? ಈ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತಿವೆ. ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದು, ಮತ್ತೊಂದೆಡೆ ಆನೆಯ ಎರಡೂ ದಂತಗಳು ನಾಪತ್ತೆಯಾಗಿರುವ ಘಟನೆಗಳು ಕಾಡಿನಲ್ಲಿ ಕಳ್ಳಬೇಟೆಗಾರರ ಚಟುವಟಿಕೆಗಳ ಬಗ್ಗೆ ಅನುಮಾನ ಮೂಡಿಸಿವೆ. ಇದನ್ನೂ ಓದಿ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಹುಲಿ – ನಿಟ್ಟುಸಿರು ಬಿಟ್ಟ ರೈತರು
