ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ ಎಂದು ಗುಜರಾತ್ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಏರ್ಪಡಿಸಿದ್ದ ಸಂವಿಧಾನ ಉಳಿವಿಗಾಗಿ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 2 ಕೋಟಿ ಉದ್ಯೋಗ ಸೃಷ್ಟಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿ ಎಂದು ಕರೆ ನೀಡಿದ್ದಾರೆ. ಈ ವೇಳೆ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ ಎಂದು ಹೇಳಿದರು.
ಇದೇ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಖೇದಕರ ಎಂದು ಹೇಳಿದ ಅವರು, ಅಟ್ರಾಸಿಟಿ ಅನ್ನು ನಾಶಮಾಡುವ ಹುನ್ನಾರ ನಡೆಯುತ್ತಿದೆ. ತೀರ್ಪಿನ ಹಿಂದೆ ಕಾಣದ ಶಕ್ತಿಗಳ ಕೈವಾಡ ಇರಬಹುದು ಎಂದು ಆರೋಪಿಸಿದರು.
ಗುಜರಾತನ್ನು ಮಾದರಿ ರಾಜ್ಯ ಎಂದು ಹೇಳುತ್ತಾರೆ. ಆದರೆ ಅಲ್ಲಿನ ದಲಿತರ, ಆದಿವಾಸಿಗಳ, ಕಾರ್ಮಿಕರ, ರೈತರ ಪರಿಸ್ಥಿತಿ ಕಷ್ಟಕಾರವಾಗಿದೆ. ಸುಪ್ರೀಂಕೋರ್ಟ್ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ಹೇಳಿಕೆ ನೀಡಿಲ್ಲ. ನ್ಯಾಯಮೂರ್ತಿ ಲೋಯಾ ಅವರ ಹತ್ಯೆಯ ಬಗ್ಗೆ ಯಾರೂ ಮಾತಾಡಿಲ್ಲ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಫ್ಯಾಸಿಸ್ಟ್ ಶಕ್ತಿ ಬಿಜೆಪಿಯನ್ನ ಸೋಲಿಸ ಬೇಕಿದೆ. ಅಲ್ಲದೇ ದೇಶದಲ್ಲಿ ಇವಿಎಂ ಗೊಂದಲವಿದೆ. ನನ್ನ ಆಯ್ಕೆ ಬ್ಯಾಲೆಟ್ ಪೇಪರ್ ಎಂದು ಹೇಳಿದರು.
ತಮ್ಮ ಭಾಷಣದ ಉದಕ್ಕೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೇವಾನಿ, ಈ ದೇಶದ ಯುವಕರನ್ನ ಮೋದಿ ಸರ್ಕಾರ ನಿರುದ್ಯೋಗಿಗಳನ್ನಾಗಿ ಮಾಡಿದೆ. ಕರ್ನಾಟಕದ ಯುವಕರಿಗೆ ಕಿವಿಮಾತು ಹೇಳುತ್ತೇನೆ. ಮೋದಿಯವರು ಚುನಾವಣೆಗೆ ಬಂದಾಗ ಕೇಳಬೇಕು ನಿಮ್ಮ ಎರಡು ಕೋಟಿ ಉದ್ಯೋಗ ಎಲ್ಲಿದೆ. ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ಇದ್ದರೆ ಹಿಮಾಲಯದ ರಾಮಮಂದಿರದಲ್ಲಿ ಗಂಟೆ ಬಾರಿಸಲು ಹೋಗಲು ಹೇಳಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸ ಬೇಕಿದ ಎಂದು ಕರೆ ನೀಡಿದರು.