ತುಮಕೂರು: ಸಿದ್ದಗಂಗಾ ಮಠದ ಶ್ರೀಗಳಾದ ಶತಾಯುಷಿ ಡಾ.ಶಿವಕುಮಾರ ಸ್ವಾಮಿಜಿಯವರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಚಾಲಕಿ ಮಹಿಳೆಯರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಕುಣಿಗಲ್ ಬಸ್ ನಿಲ್ದಾಣದಲ್ಲಿ ಮೂವರು ಮಹಿಳೆಯರು ಶ್ರೀಗಳ ಹೆಸರು ಹೇಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಕಂಡ ಕೆಲ ಸ್ಥಳೀಯರು ಪ್ರಶ್ನಿಸಿದಾಗ, ಮಹಿಳೆಯರು ಸರಿಯಾದ ಮಾಹಿತಿ ನೀಡಲಿಲ್ಲ. ಇದರಿಂದ ಅನುಮಾನಗೊಂಡ ಅವರು ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಲಕ್ಷ್ಮೀ, ಪ್ರೇಮಾ ಹಾಗೂ ಶಿಲ್ಪಾರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮಹಿಳೆಯರು ಅಖಿಲ ಭಾರತ ಪಾಲಕರ ಹಾಗೂ ವಿದ್ಯಾರ್ಥಿ ಮಹಾಸಂಘದ ಕಾರ್ಯಕರ್ತರಾಗಿದ್ದಾರೆ. ಇವರು ತಮ್ಮ ಸಂಘದ ವತಿಯಿಂದ ಸಿದ್ದಗಂಗಾ ಮಠದ ಶ್ರೀಗಳಿಗೆ ಭಾರತರತ್ನ ಕೊಡಿಸಲು ಸಹಿ ಸಂಗ್ರಹಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಕಳೆದು 15 ದಿನಗಳಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.