ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲೆಯ ಮದ್ದೂರು ಪಟ್ಟಣದ ಕೊಲ್ಲಿ ವೃತ್ತದ ಬಳಿ ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಶಕೀಲ್ ಅಹಮದ್, ಫಾರೂಕ್, ಸಾಗರ್ ಮೃತ ದುರ್ದೈವಿಗಳು.
ಶಕೀಲ್ ಅಹಮದ್ ಮತ್ತು ಫಾರೂಕ್ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಕಾರಿನಲ್ಲಿ ಹೋಗುತ್ತಿದ್ರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಹಾರಿ ಬೆಂಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಮಿನಿ ಟೆಂಪೋ ಮತ್ತು ಮತ್ತೊಂದು ಕಾರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್‍ನಲ್ಲಿದ್ದ ಶಕೀಲ್ ಅಹಮದ್, ಫಾರೂಕ್ ಮತ್ತು ಮಿನಿ ಟೆಂಪೋದಲ್ಲಿದ್ದ ಸಾಗರ್ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಅಪಘಾತದಲ್ಲಿ ಎರಡು ಕಾರು ಮತ್ತು ಒಂದು ಮಿನಿ ಟೆಂಪೋ ಜಖಂ ಆಗಿದೆ. ಘಟನೆಯಿಂದ ಮೃತರ ಮತ್ತು ಗಾಯಾಳುಗಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.