ಚಿತ್ರದುರ್ಗ: ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ಹಳಿಯೂರು ಬಳಿ ನಡೆದಿದೆ.
ಮಹಾಂತೇಶ್ (30), ದೀಪ (28) ಮತ್ತು ರಘು (8) ಮೃತ ದುರ್ದೈವಿಗಳು. ಮೃತರು ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದವರು ಎಂದು ತಿಳಿದು ಬಂದಿದೆ. ಮೃತ ದೀಪ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಪತ್ನಿಯ ಮಾಸಿಕ ಚೆಕಪ್‍ಗಾಗಿ ಮಹಾಂತೇಶ್ ಸಹೋದರ ಮಗ ರಘು ಒಟ್ಟಿಗೆ ಚಿತ್ರದುರ್ಗ ಆಸ್ಪತ್ರೆಗೆ ಹೋಗಿದ್ದರು.
ಚೆಕಪ್ ಮುಗಿಸಿಕೊಂಡು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ ವೇಳೆ ಹಳಿಯೂರು ಬಳಿ ವೇಗವಾಗಿ ಬಂದು ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಗಣಿ ಲಾರಿ ವಿರುದ್ಧ ಹಳಿಯೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಿಳಿದ್ದರು.
ಗಣಿ ಲಾರಿ ಓಡಾಟ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಮಹಲಿಂಗ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೇ ವಾಗ್ವಾದ ನಡೆದಿದೆ.
ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.