– ಮೂರು ತಿಂಗಳ ಬಳಿಕ ಬೆಳಕಿಗೆ ಬಂತು ವೈದ್ಯರ ನಿರ್ಲಕ್ಷ್ಯ
ಹೈದರಾಬಾದ್: ಶಸ್ತ್ರಚಿಕಿತ್ಸೆ ವೇಳೆ ಮಹಿಳಾ ರೋಗಿಯ ದೇಹದಲ್ಲಿ ಇಕ್ಕಳ (ಶಸ್ತ್ರಚಿಕಿತ್ಸೆ ವಸ್ತು) ಮರೆತ ಘಟನೆ ಹೈದ್ರಾಬಾದ್‍ನ ನಿಜಾಮ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್)ನಲ್ಲಿ ನಡೆದಿದೆ.
ವೈದ್ಯರ ಈ ನಿರ್ಲಕ್ಷ್ಯದಿಂದಾಗಿ ಮಹಿಳೆ ಮೂರು ತಿಂಗಳ ಕಾಲ ಭಾರೀ ನೋವು ಅನುಭವಿಸಿದ್ದಾರೆ. ಮಹಿಳೆಯ ಹೊಟ್ಟೆಯಲ್ಲಿ ಇಕ್ಕಳ ಪತ್ತೆಯಾಗುತ್ತಿದ್ದಂತೆ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹೈದರಾಬಾದ್‍ನ ಮಂಗಲ್ಹಾಟ್ ಪ್ರದೇಶದ ಮಹೇಶ್ವರಿ ಚೌದರಿ (33) ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ನಿಮ್ಸ್ ನಲ್ಲಿ ಆಪರೇಷನ್ ಮಾಡಿಸಿಕೊಂಡಿದ್ದರು. ಬಳಿಕ ಮನೆಗೆ ವಾಪಾಸ್ ಆಗಿದ್ದ ಮಹೇಶ್ವರಿ ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಎಕ್ಸ್ ರೇ ತೆಗೆಸಿದಾಗ ವೈದ್ಯರ ಎಡವಟ್ಟು ಬೆಳಕಿಗೆ ಬಂದಿದೆ.
Advertisement
Advertisement
ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮಹೇಶ್ವರಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಧರಣಿ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ಶಸ್ತ್ರಚಿಕಿತ್ಸೆ ಬಳಿಕವೂ ಮಹೇಶ್ವರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರ ಸಲಹೆಯಂತೆ ಸಾಕಷ್ಟು ಮಾತ್ರೆ, ಔಷಧಿ ಸೇವಿಸಿದರೂ ಗುಣಮುಖಳಾಗಲಿಲ್ಲ. ಹೊಟ್ಟೆಯಲ್ಲಿ ಇಕ್ಕಳ ಬಿಟ್ಟಿದ್ದೇ ಇಷ್ಟು ಸಮಸ್ಯೆಗೆ ಕಾರಣವಾಗಿದೆ ಎಂದು ಮಹೇಶ್ವರಿ ಹತ್ತಿರ ಸಂಬಂಧಿ ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಮ್ಸ್ ವೈದ್ಯ ಕೆ.ಮನೋಹರ್, ಹೊಟ್ಟೆ ನೋವಿನಿಂದಾಗಿ ಮಹೇಶ್ವರಿ ಅವರು ಅಕ್ಟೋಬರ್ 28ರಂದು ಆಸ್ಪತ್ರೆ ದಾಖಲಾಗಿದ್ದರು. ಅವರಿಗೆ ನವೆಂಬರ್ ಮೊದಲವಾರ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಚೇತರಿಸಿಕೊಂಡ ಬಳಿಕ ಅವರನ್ನು ನವೆಂಬರ್ 12ರಂದು ಮನೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ವೈದ್ಯರಾದ ಬೀರಪ್ಪ, ವೇಣು ಹಾಗೂ ವರ್ಮಾ ಅವರು ಮಹೇಶ್ವರಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನೋಹರ್ ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv