ಹಾಸನ: ಸಾಲದ ಶ್ಯೂರಿಟಿಗೆ ಸಹಿ ಹಾಕುವಂತೆ ದಂಪತಿ ಬೆದರಿಕೆ ಹಾಕಿದ್ದರಿಂದ ಮನನೊಂದು ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಜಮುನಾ (44) ಎಂದು ಗುರುತಿಸಲಾಗಿದೆ. 10 ಲಕ್ಷ ರೂ. ಸಾಲಕ್ಕೆ ಶ್ಯೂರಿಟಿಗೆ ಸಹಿ ಹಾಕುವಂತೆ ಜಮುನಾ ಅವರನ್ನು ಸಂದೀಪ್, ಧನುಶ್ರೀ ದಂಪತಿ ಪದೇ ಪದೇ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಜಮುನಾ ಒಪ್ಪದೆ ಇದ್ದಾಗ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಇದೇ ವಿಚಾರಕ್ಕೆ ಡೆತ್‌ನೋಟ್‌ನಲ್ಲಿ ದಂಪತಿ ವಿರುದ್ಧ, ನನ್ನ ಮನೆ ಹಾಳು ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ಸಂದೀಪ್-ಧನುಶ್ರೀ ಕಾರಣ ಎಂದು ಬರೆದಿಟ್ಟು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮೃತ ಜಮುನಾ ಪುತ್ರ ಸಾತ್ವಿಕ್ ಪೊಲೀಸರಿಗೆ ದೂರು ನೀಡಿದ್ದಾನೆ. ಆರು ತಿಂಗಳ ಹಿಂದೆ ಸಾತ್ವಿಕ್ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಇದೀಗ ತಾಯಿ ಕಳೆದುಕೊಂಡು ಅನಾಥನಾಗಿದ್ದಾನೆ. ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.