ಬಾಗಲಕೋಟೆ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹಾಗೂ ಹೊರ ರಾಜ್ಯದಿಂದ ಬಂದ ಸಾವಿರಾರು ಜನರನ್ನು ಜಿಲ್ಲೆಯ ಇಳಕಲ್ ತಾಲೂಕಿನ ಹನಮನಾಳ ಚೆಕ್ ಪೋಸ್ಟ್ ಬಳಿ ಜಿಲ್ಲಾಡಳಿತ ತಡೆ ಹಿಡಿದಿದೆ.
ಕುರಿಗಳನ್ನು ತುಂಬಿದಂತೆ ಜನರನ್ನು ತುಂಬಿಕೊಂಡು ಬಂದಿರುವ ಲಾರಿಯನ್ನು ನೋಡಿದ ಚೆಕ್‌ಪೋಸ್ಟ್ ಸಿಬ್ಬಂದಿ ಬೆಚ್ಚಿಬಿದ್ದಿದೆ. ಬೆಂಗಳೂರಿನಿಂದ ಇಂದು 5ಕ್ಕೂ ಹೆಚ್ಚು ಲಾರಿಗಳಲ್ಲಿ ಬಂದಿರುವ ಕೂಲಿ ಕಾರ್ಮಿಕರು ಮಧ್ಯಪ್ರದೇಶ, ರಾಜಸ್ತಾನ ಸೇರಿ ಹೊರ ರಾಜ್ಯ ಮೂಲದವರು ಎನ್ನಲಾಗುತ್ತಿದೆ.
ಬೆಂಗಳೂರಲ್ಲಿ ಕೆಲಸ ಬಂದ್ ಆಗಿದೆ. ತಮ್ಮ ಬಳಿ ದುಡ್ಡು ಇಲ್ಲ. ಊಟಕ್ಕೂ ತೊಂದರೆ ಆಗಿದೆ. ನಮ್ಮ ಊರುಗಳಿಗೆ ಹೋಗುತ್ತಿದ್ದೇವೆ ಎಂದು ಕಾರ್ಮಿಕರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದರೆ ಅಂತರ್ ಜಿಲ್ಲಾ ಪ್ರವೇಶ ಬಂದ್ ಇರುವುದರಿಂದ ಚೆಕ್‌ಪೊಸ್ಟ್‌ನಲ್ಲಿ ಸಿಬ್ಬಂದಿ ಹಾಗೂ ಇಳಕಲ್ ಪೊಲೀಸರು ವಾಹನಗಳನ್ನು ನಡೆದಿದ್ದಾರೆ. ಜೊತೆಗೆ ಜನರನ್ನು ಬಂದ ಮಾರ್ಗದಲ್ಲೇ ವಾಪಸ್ ಕಳುಹಿಸಿದ್ದಾರೆ.
ಹೀಗಾಗಿ ಸಾವಿರಾರು ಜನರು ವಾಹನ ಬಿಟ್ಟು ಹನಮನಾಳ ಗುಡ್ಡದಲ್ಲಿ ನಡೆದುಕೊಂಡು ಹೊರಟಿದ್ದಾರೆ. ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು ಮೂರು ಸಾವಿರ ಜನರು ಬಂದಿದ್ದರು. ಆದರೆ ಅಂತರ್ ಜಿಲ್ಲಾ ಗಡಿ ಭಾಗ ಬಂದ್ ಆಗಿದ್ದರೂ ಬೆಂಗಳೂರಿನಿಂದ ಈ ಜನರು ಇಳಕಲ್‍ವರೆಗೂ ಹೇಗೆ ಬಂದರು ಎಂಬ ಪ್ರಶ್ನೆ ಮೂಡಿದೆ.