ಟೋಕಿಯೋ: ಜಪಾನ್‌ನ (Japan Airlines plane) ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ (Tokyo-Haneda Airport) ನಡೆದ ದುರಂತದ ಬಗ್ಗೆ ಪ್ರಯಾಣಿಕರೊಬ್ಬರು ಒಂದು ಕ್ಷಣ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಅವಘಡ ಸಂಬಂಧ ಪ್ರಯಾಣಿಕರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡು, ಒಂದು ಕ್ಷಣ ನಾನು ಸತ್ತೇ ಹೋದೆ ಅಂದುಕೊಂಡೆ ಎಂದು ಬರೆದುಕೊಂಡಿದ್ದಾರೆ.
死ぬかと思った pic.twitter.com/S7rDPmyssl
— あ (@alto_maple) January 2, 2024
ಪ್ರಯಾಣಿಕ ಶೇರ್ ಮಾಡಿಕೊಂಡಿರುವ 11 ಸೆಕೆಂಡಿನ ವೀಡಿಯೋದಲ್ಲಿ ವಿಮಾನದ ಹೊರಗಡೆಯಿಂದ ಬೆಂಕಿಹೊತ್ತಿಕೊಳ್ಳುತ್ತಿರುವುದನ್ನು ಕಿಟಕಿಯಿಂದ ಸೆರೆಹಿಡಿಯಲಾಗಿದೆ. ಇನ್ನೊಂದು 3 ಸೆಕೆಂಡಿನ ವೀಡಿಯೋದಲ್ಲಿ ಕ್ಯಾಬಿನ್ ಫುಲ್ ಹೊಗೆ ತುಂಬಿಕೊಂಡಿದೆ. ಅಲ್ಲದೆ ಪ್ರಯಾಣಿಕನೊಬ್ಬ ಬಟ್ಟೆಯಿಂದ ತಮ್ಮ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಉಳಿದ ಪ್ರಯಾಣಿಕರು ಕಾಪಾಡುವಂತೆ ಕೂಗಿಕೊಳ್ಳುವುದನ್ನು ಕೂಡ ವೀಡಿಯೋದಲ್ಲಿ ಗಮನಿಸಬಹುದಾಗಿದೆ.
ವಿಮಾನದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಅದರಲ್ಲಿದ್ದ 379 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಪಾನ್ ವಿಮಾನ ಅವಘಡ- ಕೋಸ್ಟ್ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ
ನಡೆದಿದ್ದೇನು..?: ಮಂಗಳವಾರ ಜಪಾನ್ ಏರ್‌ಲೈನ್ಸ್ ಜೆಟ್ ಕೋಸ್ಟ್ ಗಾರ್ಡ್ (Coast Guard aircraft) ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಹೊಕ್ಕೈಡೊದಿಂದ ಟೇಕಾಫ್ ಆದ JAL 516 ವಿಮಾನವು ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಾಗ ಹೊತ್ತಿ ಉರಿದಿದೆ. ವಿಮಾನ ಡಿಕ್ಕಿಯ ಬಳಿಕ ಬೆಂಕಿ ಹೊತ್ತಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.