ದುಡ್ಡು ಇದ್ದವರು ದೇವಸ್ಥಾನ ಕಟ್ಟುತ್ತಾರೆ, ಇಲ್ಲದವರು ಇರುವಲ್ಲೇ ಪೂಜಿಸಿ: ಸಿದ್ದರಾಮಯ್ಯ

Public TV
2 Min Read
SIDDARAMAIAH 1

ಬೆಂಗಳೂರು: ದುಡ್ಡು ಇರೋರು ದೇವಸ್ಥಾನ ಕಟ್ಟುತ್ತಾರೆ, ದುಡ್ಡು ಇಲ್ಲದವರು ನೀವು ಇರುವಲ್ಲಿಯೇ ದೇವರ ಪೂಜೆ ಮಾಡಿ. ಸತ್ಯವೇ ದೇವರು, ಸತ್ಯ ಹೇಳಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮಾರ್ಮಿಕವಾಗಿ ಹೇಳಿದ್ದಾರೆ.

ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್ ಮುತ್ತುರಾಜ್ ಅವರ ಮಂಗಳವಾದ್ಯ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇವರು ಇಲ್ಲ ಅಂತಾ ನಾನು ಹೇಳಲ್ಲ, ದೇವರು ಇದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿಯೇ ಇರಲ್ಲ, ಎಲ್ಲೆಲ್ಲೂ ಇದ್ದಾನೆ. ಎಲ್ಲೆ ಇದ್ದಾನೆ ಅಲ್ಲೇ ಪೂಜೆ ಮಾಡಿ. ಎನ್ನ ಕಾಲೇ ಕಂಬ, ಎನ್ನ ದೇಹವೇ ದೇಗುಲ, ಹೊನ್ನ ಶಿರವೇ ಕಳಸವಯ್ಯ ಅಂತಾ ಬಸವಣ್ಣ ಹೇಳಿದ್ದಾರೆ. ದುಡ್ಡು ಇರೋರು ದೇವಸ್ಥಾನ ಕಟ್ಟುತ್ತಾರೆ, ದುಡ್ಡು ಇಲ್ಲದವರು ನೀವು ಇರುವಲ್ಲಿಯೇ ದೇವರ ಪೂಜೆ ಮಾಡಿ. ಸತ್ಯವೇ ದೇವರು, ಸತ್ಯ ಹೇಳಿ ಎಂದು ಹೇಳಿದರು.

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮುಸ್ಲೀಮರನ್ನು, ದಲಿತರನ್ನು, ಶೂದ್ರರನ್ನು, ಶ್ರಮಿಕ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯವಾದ, ಕೆಟ್ಟ ನಡವಳಿಕೆ. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಒಳಗೆ ಬಿಡುವುದಿಲ್ಲವೋ ಆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿ. ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜೆ ಮಾಡಿ ಎಂದು ನಾರಾಯಣಗುರುಗಳು ಹೇಳಿದ್ದಾರೆ. ಇದನ್ನು ಪಾಲಿಸಿ ಎಂದರು. ಇದನ್ನೂ ಓದಿ: ಲೋಕಸಭೆ ಟಿಕೆಟ್‍ಗಾಗಿ ಸೋಮಣ್ಣ ಲಾಬಿ- ಬುಧವಾರ ಅಮಿತ್ ಶಾ ಭೇಟಿ

ಮನುಷ್ಯ ಮನುಷ್ಯನನ್ನ ದ್ವೇಷ ಮಾಡಬಾರದು, ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು. ಈಗ ಏನ್ ಆಗಿದೆ ಅಂದ್ರೆ ಮನುಷ್ಯ ಮನುಷ್ಯನನ್ನ ದ್ವೇಷಿಸುತ್ತಾನೆ. ಧರ್ಮ, ಜಾತಿ ಅಂತಾ ದ್ವೇಷ ಮಾಡಬಾರದು. ಅವನು ಮುಸ್ಲಿಂ, ಅವನು ಕ್ರಿಶ್ಚಿಯನ್, ಅವನು ಬೇರೆ ಜಾತಿ ಅಂತಾ ದ್ವೇಷ ಮಾಡಬಾರದು. ಕುವೆಂಪು ಅವರು ಏನ್ ಹೇಳಿದ್ದಾರೆ, ಸರ್ವ ಜನಾಂಗದ ಶಾಂತಿಯ ತೋಟ ಅಂದಿದ್ದಾರೆ. ಹಾಗಾಗಿ ಯಾರನ್ನೂ ದ್ವೇಷ ಮಾಡಬಾರದು ಎಂದರು.

ಇದೇ ವೇಳೆ ಬಿಜೆಪಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ, ನಾನು ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ. ನಾವು ರೂಪಿಸುವ ಕಾರ್ಯಕ್ರಮಗಳೂ ಬಡವರ ಪರವಾಗಿ ಇರುತ್ತವೆ. ನಮ್ಮ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜತೆಗಿದ್ದಾರೆ ಅಂತೇಳಿದ್ರು.

Share This Article