ನಾನು ಗುರುತಿಸಿದವರೇ, ನನಗೆ ಮೋಸ ಮಾಡಿದರು – ಸುದ್ದಿಗೋಷ್ಠಿಯಲ್ಲಿ ಎಚ್‍ಡಿಡಿ ಕಣ್ಣೀರು

Advertisements

ಬೆಂಗಳೂರು: ನೀವು ಗುರುತಿಸಿದವರು ಹೇಗೆ ಮೋಸ ಮಾಡಿದರು ಎಂದು ಸಭೆಯಲ್ಲಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಅವರು ಮಾತನಾಡಿದ್ದು ಸರಿ, ನಾನು ತಪ್ಪಿತಸ್ಥರ ಸ್ಥಾನದಲ್ಲಿದ್ದೇನೆ ಎನ್ನುತ್ತಲೇ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದಾರೆ.

Advertisements

ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷ್ಟಾವಂತ ಕಾರ್ಯಕರ್ತರು ಗುರುತಿಸಿದ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೆನೆ. ನಾನು ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸುವಲ್ಲಿ ವಿಫಲನಾದೆ. ಹೀಗಾಗಿ ಅತ್ಯಂತ ನೋವಿನಲ್ಲಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.

Advertisements

ಕಾರ್ಪೋರೇಷನ್, ಬಿಡಿಎ, ಎಲ್ಲಾ ಹುದ್ದೆ ಕೊಟ್ಟಿದ್ದೇವೆ. ಆದರೂ ಮೋಸ ಮಾಡಿದರು. ನನಗೋಸ್ಕರ ಹೋರಾಟ ಮಾಡಿದ ಕಾರ್ಯಕರ್ತರಿಗೆ ನಾನು ಯಾವುದೇ ಸ್ಥಾನ ಮಾನ ಕೊಡಲಿಲ್ಲ. ಅಲ್ಲದೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಾಗಲೂ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಸಭೆಯಲ್ಲಿ ನನ್ನ ಮನದಾಳದ ನೋವನ್ನ ಪ್ರಶ್ನೆ ಮಾಡಿದ್ದಾರೆ. ನೀವು ಗುರುತಿಸಿದವರೇ ಹೇಗೆ ಮೋಸ ಮಾಡಿದರು ನೋಡಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಾತಾಡಿದ್ದು ಸರಿ ನಾನು ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದೆನೆ ಎಂದು ಗಳಗಳನೆ ಅತ್ತಿದ್ದಾರೆ.

ಸ್ಪೀಕರ್ 14 ಜನ ಶಾಸಕರನ್ನು ಅನರ್ಹ ಮಾಡಿದ್ದಾರೆ. ದೇಶದಲ್ಲೇ ಇದು ಐತಿಹಾಸಿಕ ತೀರ್ಪು ಎಂದು ಭಾವಿಸುತ್ತೆನೆ. ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಹಲವಾರು ತೀರ್ಪುಗಳು ಹೈ ಕೋರ್ಟ್‍ನಲ್ಲಿ ಹೊರಬಿದ್ದಿದೆ. ಆದರೆ ರಾಜ್ಯದಲ್ಲಿ ಸಭಾಧ್ಯಕ್ಷರು ವಿಶೇಷವಾದ ತೀರ್ಪು ಕೊಟ್ಟಿದ್ದಾರೆ. ಸ್ಪೀಕರ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲು 3 ಜನ ಅತೃಪ್ತ ಶಾಸಕರು ಹೊರಟಿದ್ದಾರೆ. ನಾಳೆ ಅವರೆಲ್ಲಾ ನಮ್ಮನ್ನುದ್ದೇಶಿಸಿ ಮಾತನಾಡಬಹುದು. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

Advertisements

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರೀಯಾ ಲೋಪ ಎತ್ತಿದ್ದಾರೆ. ನಾಳೆ ವಿಧಾನಸಭೆ ಅಧಿವೇಶನ ಕರೆದಿರೋದು ಸರಿ ಅಲ್ಲ ಎಂದು ಕ್ರಿಯಾಲೋಪ ಎತ್ತಿದ್ದಾರೆ. ಆದರೆ ಬಿಜೆಪಿಯವರು ಸ್ಪೀಕರ್ ವಿರುದ್ದವೇ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಾರೆಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾಳೆ ಅಧಿವೇಶನ ಕರೆದಿರುವ ಕಾರಣವನ್ನು ಅವರೇ ತಿಳಿಸುತ್ತಾರೆ. ಅವರ ಹಕ್ಕಿನಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‍ಗೆ ಓಟಿನ ಬಜೆಟ್ ಎಂದು ಟೀಕಿಸುತ್ತಾರೆ. ನಾಳೆ ಕುಮಾರಸ್ವಾಮಿ ಬಜೆಟ್ ಮೇಲೆಯೇ ಹಣಕಾಸು ಮಸೂದೆ ಬಿಲ್ ಪಡೆಯಲಿದ್ದಾರೆ. ಹೀಗಾಗಿ ವಿರೋಧ ಮಾಡುವುದಿಲ್ಲ ಎಂದು ತಿಳಿಸಿದರು.

ಇನ್ನೂ ಮೂರು ವರ್ಷ ಎಂಟು ತಿಂಗಳು ಯಡಿಯೂರಪ್ಪ ಸರ್ಕಾರ ನಡೆಸಿದಲ್ಲಿ ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕರಾಗಿ ಮುಂದುವರಿಯಲಿದ್ದಾರೆ. ಕುಮಾರಸ್ವಾಮಿ ಫ್ಲೋರ್ ಲೀಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕುಮಾರಸ್ವಾಮಿ ಅಧಿಕೃತ ವಿರೋಧ ಪಕ್ಷದ ನಾಯಕರಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಹೇಗೆ ಕೆಲಸ ಮಾಡಿದ್ದಾರೋ, ಅದೇ ರೀತಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಸುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಕಾಂಗ್ರೆಸ್‍ನ ವರಿಷ್ಠರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ರಾಷ್ಟ್ರದ ಮುಖಂಡರ ಜೊತೆ ಚರ್ಚಿಸಿ, ಅಭಿಪ್ರಾಯ ಪಡೆದು, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisements
Exit mobile version