90 ರ ದಶಕದಲ್ಲಿ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಹಂತಹಂತವಾಗಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಾ ಹೋಯಿತು. ಹಾಗೆಯೇ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಬೆಳೆಯಲು ಪ್ರಾರಂಭಿಸಿದವು. ಭ್ರಷ್ಟಾಚಾರ, ಮಿತಿ ಮೀರಿದ ಹಗರಣಗಳ ಆರೋಪ ಹಾಗೂ ಆಂತರಿಕ ಭಿನ್ನಾಭಿಪ್ರಾಯ ಕಾಂಗ್ರೆಸ್‌ಗೆ ಮುಳುವಾಯಿತು. ಇತ್ತ ಪ್ರಾದೇಶಿಕ ಪಕ್ಷಗಳೊಂದಿಗೆ ಸ್ನೇಹ ಹಸ್ತ ಚಾಚುವ ಮೂಲಕ ಬಿಜೆಪಿ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಾ ಹೋಯಿತು. ಈ ಎಲ್ಲಾ ಬೆಳವಣಿಗೆಗಳ ಪರಿಣಾಮ 1996 ರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿತು.
1991 ರ ಚುನಾವಣೆಯಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿ ಪಿ.ವಿ.ನರಸಿಂಹರಾವ್ (ಪಿವಿಎನ್) ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು. ಭಾರತದ ಪ್ರಥಮ ಪ್ರಧಾನಿ ನೆಹರೂ ಮನೆತನದ ಪ್ರಧಾನಿಗಳ ನಂತರ ಆಡಳಿತಾವಧಿಯ ಐದು ವರ್ಷಗಳನ್ನು ಪೂರೈಸಿದ ಮೊದಲ ಪ್ರಧಾನಿ ಎನ್ನುವುದು ಪಿವಿಎನ್ (P. V. Narasimha Rao) ಹೆಗ್ಗಳಿಕೆಯಾಗಿತ್ತು.
Advertisement
Advertisement
ಹಗರಣ, ಕರಾಳ ಘಟನೆಗಳಿಗೆ ಸಾಕ್ಷಿ
ಪ್ರಧಾನಿ ಪಿವಿಎನ್ ಕಾಲದಲ್ಲೇ ವಿವಾದಾತ್ಮಕ ಬಾಬ್ರಿ ಮಸೀದಿ (Babri Masjid) ನೆಲಸಮವಾಯಿತು. ಸ್ವತಃ ಪಿವಿಎನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾದವು. ಕೆಲವು ಪ್ರಕರಣಗಳಲ್ಲಿ ಖುಲಾಸೆಗೊಂಡರು. ಜೆಎಂಎಂ ಸಂಸದರ ಲಂಚಗುಳಿತನ ಮತ್ತು ಲಖ್ಖುಭಾಯಿ ವಂಚನೆ ಪ್ರಕರಣ, ಸೆಂಟ್‌ಕಿಟ್ಸ್ ಪೋರ್ಜರಿ ಹಗರಣ, ಹವಾಲಾ ಹಗರಣ ಹೀಗೆ ಹಲವು ಸಂಕಟಗಳ ನಡುವೆ ಸರ್ಕಾರ ನಿಭಾಯಿಸಿದರು. 1995 ರ ಕೊನೆಯಲ್ಲಿ ಕಾಶ್ಮೀರ ಪ್ರದೇಶದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಿದಾಗ ಸರ್ಕಾರದ ವಿಶ್ವಾಸಾರ್ಹತೆ ಇನ್ನೂ ಕುಸಿಯಿತು. ಪಂಜಾಬ್ ಪ್ರಾಂತ್ಯದಲ್ಲಿ ಜನಾಂಗೀಯ ಉದ್ವಿಗ್ನತೆ ಹೆಚ್ಚಾಯಿತು. ಹಗರಣಗಳ ಪರಿಣಾಮವಾಗಿ, ರಾವ್ ಸರ್ಕಾರಕ್ಕೆ 1996 ರ ಚುನಾವಣೆಯಲ್ಲಿ ಜನ ಬೆಂಬಲ ಕೆಳಮಟ್ಟಕ್ಕೆ ಕುಸಿಯಿತು.
Advertisement
ಬಾಬ್ರಿ ಮಸೀದಿ ಧ್ವಂಸ
1992 ರ ಡಿಸೆಂಬರ್ 6 ರಂದು ಸಾವಿರಾರು ಕರಸೇವಕರು ಅಯೋಧ್ಯೆಗೆ ಲಗ್ಗೆಯಿಟ್ಟು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದರು. ಇಡೀ ದೇಶದಲ್ಲಿ ಮತೀಯ ಗಲಭೆಗಳು ನಡೆದವು. ರಾಮಜನ್ಮಭೂಮಿಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸಿತು. ಇದು 11ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣವಾಯಿತು.
Advertisement
ರಾಮಮಂದಿರ, ಹಿಂದುತ್ವ ಬಿಜೆಪಿ ಅಜೆಂಡಾ
ಕಾಂಗ್ರೆಸ್ ಸರ್ಕಾರದ ವಿರುದ್ಧ ಹಗರಣಗಳ ಆರೋಪದೊಂದಿಗೆ ರಾಮಮಂದಿರ ನಿರ್ಮಾಣ ಹಾಗೂ ಹಿಂದುತ್ವದ ಅಜೆಂಡಾದೊಂದಿಗೆ ಬಿಜೆಪಿ ಚುನಾವಣಾ ಪ್ರಚಾರ ನಡೆಸಿತು. ಎಲ್.ಕೆ.ಅಡ್ವಾಣಿ ನೇತೃತ್ವದ ಬಿಜೆಪಿ ಹಲವಾರು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಗೆ ಪ್ರಯತ್ನಿಸಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಬಹುಜನ ಸಮಾಜ ಪಕ್ಷಗಳ ಜೊತೆ ಮೈತ್ರಿ ಸಾಧಿಸಲು ಸಾಧ್ಯವಾಗಲಿಲ್ಲ. ಆದರೂ ಬಿಜೆಪಿ ಹಲವಾರು ಪ್ರಬಲ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ, ಹರಿಯಾಣ ವಿಕಾಸ್ ಪಕ್ಷ ಮತ್ತು ಸಮತಾ ಪಕ್ಷ ಜೊತೆ ಸೇರಿತು.
ಚುನಾವಣೆ ಅವಧಿ
1996 ರ ಏಪ್ರಿಲ್ 27- ಮೇ 30 (ಒಟ್ಟು 34 ದಿನ)
ಪಕ್ಷಗಳ ಸ್ಪರ್ಧೆ
8 ರಾಷ್ಟ್ರೀಯ ಪಕ್ಷಗಳು, 30 ಪ್ರಾದೇಶಿಕ ಪಕ್ಷಗಳು ಸೇರಿ 209 ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು.
ಒಟ್ಟು ಕ್ಷೇತ್ರಗಳು: 543
ಮತದಾರರ ವಿವರ
ಒಟ್ಟು ಮತದಾರರು: 59,25,72,288 ಮಂದಿ
ಪುರುಷರು: 30,98,15,776 ಮಂದಿ
ಮಹಿಳೆಯರು: 28,27,56,512 ಮಂದಿ
ಮತದಾನ: 34,33,08,090
ಶೇಕಡವಾರು ಮತದಾನ: 57.94%
ಒಟ್ಟು ಅಭ್ಯರ್ಥಿಗಳು: 13,952
ಮಹಿಳಾ ಅಭ್ಯರ್ಥಿಗಳು: 599 (ಗೆಲುವು 40)
ಪಕ್ಷಗಳ ಬಲಾಬಲ
ಬಿಜೆಪಿ – 161
ಕಾಂಗ್ರೆಸ್ – 140
ಜನತಾ ದಳ – 46
ಸಿಪಿಎಂ – 32
ಸಿಪಿಐ – 12
ಎಸ್‌ಎಪಿ – 8
ಎಐಐಸಿ (ಟಿ) – 4
ಇತರೆ – 140
ದೇಶದ ಪ್ರಧಾನಿಯಾದ ಮೊದಲ ಬಿಜೆಪಿ ನಾಯಕ ವಾಜಪೇಯಿ
1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರಹೊಮ್ಮಿತು. 519 ಸೀಟುಗಳ ಪೈಕಿ ಬಿಜೆಪಿ 161 ಸೀಟುಗಳನ್ನು ಗೆದ್ದರೆ, ಕಾಂಗ್ರೆಸ್ 140 ಹಾಗೂ ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿಜೆಪಿಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ (Shankar Dayal Sharma) ಆಹ್ವಾನವಿತ್ತರು. ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಬಿಜೆಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. 1996 ರ ಮೇಲೆ 16 ರಂದು ವಾಜಪೇಯಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
16 ದಿನದ ಪ್ರಧಾನಿ
ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು. ಕಾಂಗ್ರೆಸ್ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ ಹೆಚ್.ಡಿ.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.
ದಿಲ್ಲಿ ಗದ್ದುಗೆ ಏರಿದ ಕನ್ನಡಿಗ
1996 ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಮೈತ್ರಿಕೂಟ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ ದೇವೇಗೌಡರು (HD Devegowda) ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು. ಭಾರತದ 11ನೇ ಪ್ರಧಾನಿಯಾದರು. 1996 ರ ಜೂನ್ 1 ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1997 ರ ಏಪ್ರಿಲ್ 21 ರ ವರೆಗೆ ಅಧಿಕಾರದಲ್ಲಿ ಮುಂದುವರೆದರು.
ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಜನತಾ ದಳ – 16
ಬಿಜೆಪಿ – 6
ಕಾಂಗ್ರೆಸ್ – 5
ಕೆಸಿಪಿ – 1
ಒಂದಂಕಿಗೆ ಕುಸಿದ ಕಾಂಗ್ರೆಸ್
ದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿಲ್ಲದಿದ್ದರೂ ಕರ್ನಾಟಕದಲ್ಲಿ ಎರಡಂಕಿ ಸ್ಥಾನಗಳನ್ನು ಗೆಲ್ಲುತ್ತಿತ್ತು. ಆದರೆ ಮೊದಲ ಬಾರಿಗೆ 1996 ರ ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿಗೆ ಕುಸಿತ ಕಂಡಿತು. 28 ಕ್ಷೇತ್ರಗಳ ಪೈಕಿ ಆಗ ಕಾಂಗ್ರೆಸ್ ಗೆದ್ದು 5 ಸ್ಥಾನಗಳನ್ನು ಮಾತ್ರ. ಜನತಾ ದಳ 16 ಸ್ಥಾನಗಳನ್ನು ಗೆದ್ದು ಗಮನ ಸೆಳೆದಿತ್ತು.