ಭೋಪಾಲ್: ಮಹಿಳೆಯರ ಬಲವಂತದ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸಲು ನಮ್ಮ ಸರ್ಕಾರ ಕಾನೂನಿಗೆ ತಿದ್ದುಪಡಿ ತರಲಿದೆ ಎಂದು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ.
ಬಲವಂತದ ಮತಾಂತರ ವಿಚಾರದಲ್ಲಿ ಬಿಜೆಪಿ ಸರ್ಕಾರ ಸಹಿಷ್ಣು ಆಗಲ್ಲ. ಅಪ್ರಾಪ್ತೆಯರ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆಯಂತೆಯೇ, ಹುಡುಗಿಯರ ಧಾರ್ಮಿಕ ಮತಾಂತರಕ್ಕೂ ಮರಣದಂಡನೆ ವಿಧಿಸುವ ನಿಬಂಧನೆಯನ್ನು ನಮ್ಮ ಸರ್ಕಾರ ಪರಿಚಯಿಸಲಿದೆ ಎಂದು ಸಿಎಂ ಹೇಳಿದ್ದಾರೆ.
Advertisement
Advertisement
ಮುಗ್ಧ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವವರ ವಿರುದ್ಧ ಸರ್ಕಾರ ತುಂಬಾ ಕಟ್ಟುನಿಟ್ಟಾಗಿದೆ. ಈ ನಿಟ್ಟಿನಲ್ಲಿ ಮರಣದಂಡನೆಗೆ ಅವಕಾಶ ಕಲ್ಪಿಸಲಾಗುವುದು. ಇದರ ಜೊತೆಗೆ, ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸುವ ಅವಕಾಶವನ್ನು ಸಹ ಪರಿಚಯಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಸಿಎಂ ಹೇಳಿಕೆಗೆ ಕಾಂಗ್ರೆಸ್ ನಾಯಕ ಆರಿಫ್ ಮಸೂದ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸ್ವಯಂಪ್ರೇರಿತ ಮತಾಂತರವು ಸಾಂವಿಧಾನಿಕ ಹಕ್ಕು. ಕಾನೂನು ಬಲವಂತದ ಮತಾಂತರವನ್ನು ವಿರೋಧಿಸುವುದಾದರೆ, ಅದು ತಾರತಮ್ಯವಿಲ್ಲದೆ ಎಲ್ಲರಿಗೂ (ಧರ್ಮಕ್ಕೂ) ಅನ್ವಯಿಸಬೇಕು ಎಂದಿದ್ದಾರೆ.
Advertisement
ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದೋಷಗಳಿವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆಯೇ ಎಂದು ಮಸೂದ್ ಪ್ರಶ್ನಿಸಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸಲಿದ್ದೇನೆ ಎಂದು ಅವರು ಒಪ್ಪಿಕೊಳ್ಳಲಿ ಅಥವಾ ಅದರಲ್ಲಿ ದೋಷಗಳಿವೆ ಎಂದು ಹೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.