ರಾಮನಗರ: ಸಿದ್ದರಾಮಯ್ಯನವರ (Siddaramaiah) ಅವಶ್ಯಕತೆ ಈ ರಾಜ್ಯಕ್ಕೆ ಇದೆ. ಮುಂದೆಯೂ ಅವರ ಮಾರ್ಗದರ್ಶನದಲ್ಲೇ ಚುನಾವಣೆ ನಡೆಯಬೇಕಿದೆ ಎಂದು ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
ಡಿಸಿಎಂ ಡಿಕೆಶಿಗೆ (DK Shivakumar) ಸಿಎಂ ಸ್ಥಾನ ನೀಡುವ ವಿಚಾರವಾಗಿ ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ನಾನಾಗಲಿ, ಶಾಸಕರಾಗಲಿ ಸಿಎಂ ಮಾಡಲು ಆಗಲ್ಲ. ಸಿದ್ದರಾಮಯ್ಯ ಇರಬೇಕಾ, ಡಿಕೆಶಿಗೆ ಅವಕಾಶ ಕೊಡಬೇಕಾ ಎಂಬ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ. ಶೀಘ್ರದಲ್ಲೇ ಸಿಎಂ, ಡಿಸಿಎಂ ಇಬ್ಬರನ್ನೂ ಸಭೆ ಕರೆಯುವ ಸಾಧ್ಯತೆ ಇದೆ ಎಂದರು. ಇದನ್ನೂ ಓದಿ: ರಾಜೌರಿಯಲ್ಲಿ 4 Kg ಐಇಡಿ ನಿಷ್ಕ್ರಿಯ – ಭಯೋತ್ಪಾದಕರ ಸಂಜು ವಿಫಲ, ತಪ್ಪಿದ ಅನಾಹುತ
ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ಬಂದಮೇಲೆ ಸಿಎಂ, ವಿಪಕ್ಷ ನಾಯಕ ಆಗಿದ್ದು. ಈಗ ನಮ್ಮ ಮನೆ ಯಜಮಾನ, ಪ್ರಶ್ನಾತೀತ ನಾಯಕ. ಅವರಿಗೆ ನಾಳೆಯೇ ಕೊಡಬೇಕು, ನಾಡಿದ್ದೇ ಕೊಡಬೇಕು ಅಂತ ಕೇಳಲು ಆಗಲ್ಲ. ಒಳ್ಳೆಯ ನಾಯಕತ್ವ, ಅವರಿಗೆ ಅವಕಾಶ ಕೊಡಲಿ ಎಂಬುದು ನಮ್ಮ ಅಭಿಪ್ರಾಯ. ಮುಂದಿನ ದಿನಗಳಲ್ಲಿ ಇದು ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: 161 ಮನೆ ನೆಲಸಮ ಆಗಿದೆ, 26 ಜನಕ್ಕೆ ಇವತ್ತೇ ಮನೆ ಕೊಡಬಹುದು: ಜಮೀರ್
ಬಳ್ಳಾರಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಶೂಟೌಟ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಜನಾರ್ದನ ರೆಡ್ಡಿ ತುಂಬಾ ಬುದ್ಧಿವಂತರಿದ್ದಾರೆ, ಸುಮ್ಮನೆ ಅಪಪ್ರಚಾರ ಮಾಡಬಾರದು. ನಮ್ಮ ಕಾರ್ಯಕರ್ತರನ್ನ ನಾವೇ ಕೊಲ್ಲಲು ಆಗುತ್ತಾ? ಜನಾರ್ದನ ರೆಡ್ಡಿ ಕಡೆಯವರು ದೊಣ್ಣೆ, ಖಾರದ ಪುಡಿ ತಂದಾಗ ರಕ್ಷಣೆಗಾಗಿ ಗುಂಡು ಹಾರಿಸಿರಬಹುದು. ಈ ವೇಳೆ ಹೆಚ್ಚುಕಡಿಮೆ ಆಗಿ ಗುಂಡು ತಗುಲಿರಬಹುದು. ಈ ಬಗ್ಗೆ ಇನ್ನೂ ತನಿಖೆ ಆಗುತ್ತಿದೆ. ಈಗಲೇ ಜನಾರ್ದನ ರೆಡ್ಡಿ ಅದನ್ನ ಎತ್ತಿಕಟ್ಟುವ ಕೆಲಸ ಮಾಡಬಾರದು. ನಮ್ಮ ಎಂಎಲ್‌ಎ ವಾಲ್ಮೀಕಿ ಕಾರ್ಯಕ್ರಮ ಮಾಡುವಾಗ ಇವರೇಕೆ ಆಚೆ ಬಂದ್ರು? ಅವರ ಮನೆಯೊಳಗೆ ಹೋಗಿ ಇವರು ಬ್ಯಾನರ್ ಹಾಕಿದ್ರಾ? ರಸ್ತೆಯಲ್ಲಿ ಬ್ಯಾನರ್ ಹಾಕಿದ್ರೆ ಯಾಕೆ ಗಲಾಟೆ ಮಾಡಬೇಕು? ಈ ಎಲ್ಲಾ ಘಟನೆಗೆ ಜನಾರ್ದನ ರೆಡ್ಡಿಯೇ ನೇರ ಹೊಣೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರದೇ ಇದ್ದಾಗ ಎಲ್ಲವೂ ನೆಮ್ಮದಿಯಾಗಿತ್ತು. ಇವರು ಬಂದಮೇಲೆ ಈಗ ಬೆಂಕಿ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡಿದ್ದಾಳೆ: ಸಂತೋಷ್ ಲಾಡ್


