ತಿರುವನಂತಪುರ: `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚೀತಸಬೇಡಿ’ ಎಂದು ಪಾಂಡ್ಯಾ ನಾಯಕ ಕೊಹ್ಲಿಗೆ ಭರವಸೆ ನೀಡಿ, ನಿರ್ಣಾಯಕ ಓವರ್ ನಲ್ಲಿ ಕೇವಲ 12 ರನ್‍ಗಳನ್ನು ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಕೊಹ್ಲಿ, ಪಾಂಡ್ಯಾ ಅಂತಿಮ ಓವರ್‍ನಲ್ಲಿ ಹೇಳಿದ ಮಾತನ್ನು ಬಿಚ್ಚಿಟ್ಟರು. ಪಂದ್ಯದ ನಿರ್ಣಾಯಕ ಒವರ್‍ನಲ್ಲಿ ಬೌಲರ್‍ಗೆ ಧೈರ್ಯ ತುಂಬುವುದು ನಾಯಕನ ಕರ್ತವ್ಯ ಆದ್ದರಿಂದಲೇ ನಾನು ಪಾಂಡ್ಯಾಗೆ ಸಲಹೆ ನೀಡಲು ತೆರಳಿದೆ. ಈ ವೇಳೆ ಪಾಂಡ್ಯಾ ತಮ್ಮದೇ ಶೈಲಿಯಲ್ಲಿ `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚಿಂತಿಸಬೇಡಿ’ ಎಂದರು. ತಂಡದ ನಾಯಕನಿಗೆ ಬೌಲರ್ ಇಷ್ಟು ಭರವಸೆ ನೀಡಿದರೆ ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
Advertisement
Advertisement
ಪಾಂಡ್ಯಾ ಅವರ ಬೌಲಿಂಗ್ ಮೇಲಿನ ವಿಶ್ವಾಸದಿಂದಲೇ ಅವರಿಗೆ ಬಾಲ್ ನೀಡಿದೆ. ಪಾಂಡ್ಯಾರ ಆಫ್ ಕಟ್ ಸ್ವಿಂಗ್ ಉತ್ತಮ ಫಲಿತಾಂಶವನ್ನು ನೀಡಿತು. ಇನ್ನೂಳಿದಂತೆ ಬೂಮ್ರಾ ಅವರ ಶಿಸ್ತುಬದ್ಧ ದಾಳಿ ನ್ಯೂಜಿಲೆಂಡ್ ಆಟಗಾರರನ್ನು ಒತ್ತಡದಲ್ಲಿ ಸಿಲುಕಿಸಿತು ಎಂದರು.
Advertisement
ಒಟ್ಟಾರೆ ತಂಡದ ಸಾಂಘಿಕ ಹೋರಾಟದಿಂದ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
Advertisement
ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯಾ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.