ಬೆಂಗಳೂರು: ಇದು ನನ್ನ ಜೀವನದಲ್ಲೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆದರೆ ಈಗ ಮಾತನಾಡುತ್ತಿದ್ದೇನೆ ಎಂದು ಹೇಳಿ ಈಶ್ವರಪ್ಪ ದೋಸ್ತಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 6 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ಬಿಜೆಪಿ ಶಾಸಕರು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಸದನದಲ್ಲಿ ಮಾತನಾಡಿದ ಈಶ್ವರಪ್ಪ, ಯಾರು ಕೂಡ ಸಭೆಯಲ್ಲಿ ಮಾತನಾಡಬೇಡಿ ಎಂದು ನಮ್ಮ ನಾಯಕರು ನಮಗೆ ಸೂಚಿಸಿದ್ದರು. ಹೀಗಾಗಿ ಇಷ್ಟು ದಿನ ನಾನು ಸುಮ್ಮನೆ ಕುಳಿತು ಆಡಳಿತ ಪಕ್ಷದವರ ಮಾತುಗಳನ್ನು ಅಲಿಸುತ್ತಿದ್ದೆ. ಇದು ನನ್ನ ಜೀವನದಲ್ಲಿಯೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆಡಳಿತ ಪಕ್ಷದವರು ಮಾತನಾಡಲು ಸಿದ್ಧವಿಲ್ಲ. ಅದಕ್ಕೆ ಇಂದು ಮಾತನಾಡುತ್ತಿದ್ದೇನೆ ಎಂದು ಕಿಡಿಕಾರಿದರು.
Advertisement
Advertisement
ವಿಶ್ವಾಸಮತಯಾಚನೆಗೆ ಸಿಎಂ ಅವರೇ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ? ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗಿದೆ ಪರಿಸ್ಥಿತಿ. ನಾನು ಉಳಿದ ವಿಚಾರದ ಬಗ್ಗೆ ಮಾತನಾಡಲ್ಲ. ಈ ಸದನದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ತಾವು ಸೂಚನೆ ಕೊಟ್ಟ ಸಮಯಕ್ಕೆ ಶಾಸಕರು ಇಲ್ಲಿ ಬಂದು ಕೂರಬೇಕಿತ್ತು. ಅದನ್ನು ಬಿಟ್ಟು ಮಧ್ಯಾಹ್ನ 3, 4 ಗಂಟೆ ಹೊತ್ತಿಗೆ ನಾವೇನು ಮಾತನಾಡಿಲ್ಲ, ನಮಗೆ ಅವಕಾಶ ಕೊಡಿ ಎನ್ನುತ್ತಾರೆ. ಹೊಸ ಶಾಸಕರು ಬಂದಿದ್ದೇವೆ, ಜನರ ಸಮಸ್ಯೆ ಹೇಳಲು 5-10 ನಿಮಿಷ ಸಮಯ ಕೊಡಿ ಎಂದು ಕೇಳುತ್ತಾರೆ ಎಂದು ದೂರಿದರು.
ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೂ ಅವರು ಕೂಗುವುದಕ್ಕೆ ಶುರುಮಾಡಿದರೆ, ನಾವು ಅನುಭವಿಸಬೇಕು. ನನ್ನ ಜೀವನದಲ್ಲಿ ಶಾಸಕನಾಗಿ ಬಂದಮೇಲೆ ಇಂತಹ ಪರಿಸ್ಥಿತಿಯನ್ನು ನಾನು ಎಂದೂ ಕಂಡಿರಲಿಲ್ಲ. ಸದನದ ಪಾವಿತ್ರ್ಯತೆ ಹಾಳಾಗಿದೆ. ಶಾಸಕರು ಇಷ್ಟಪಟ್ಟಾಗ ಅವರೇ ಮಾತನಾಡುತ್ತಾರೆ. ಅವರಿಗೆ ಕಷ್ಟವಾದಾಗ ಕಲಾಪ ಮುಂದಕ್ಕೆ ಹಾಕುತ್ತಾರೆ. ಹೊಟ್ಟೆ ಹಸಿದಾಗ ಒಂದು ರೀತಿ, ಆಮೇಲೆ ಇನ್ನೊಂದು ರೀತಿ ವರ್ತಿಸುತ್ತಾರೆ ಎಂದು ಹರಿಹಾಯ್ದರು.
ನಾವು 105 ಮಂದಿ ಇದ್ದೇವೆ, ನಮ್ಮಲ್ಲೂ ಕೂಡ ಹೊಸ ಶಾಸಕರು ಇದ್ದಾರೆ. ಈ ಸದನವನ್ನು ನೋಡಿ ಕಲಿತಿದ್ದೇನು? 50-60 ಮಂದಿ ಆಡಳಿತ ಪಕ್ಷದವರು ಬಂದು ಸಭೆ ನಡೆಯೋಕೆ ಬಿಡಲ್ಲ ಎನ್ನುತ್ತಾರೆ. ನಿಮ್ಮ ಧ್ವನಿ ಜೋರಾಗಿದೆ ಅದಕ್ಕೆ ಸಭೆ ನಿಲ್ಲಿಸಲು ಯತ್ನಿಸುವ ಶಾಸಕರು ವಾಪಸ್ ಬಂದು ಕುಳಿತುಕೊಳ್ಳುತ್ತಿದ್ದರು. ಆದರೆ ಸಣ್ಣ ಧ್ವನಿಯ ಸ್ಪೀಕರ್ ಬಂದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಪ್ರಿಯಾಂಕ್ ಖರ್ಗೆ ಎಲ್ಲರೂ ಬರುತ್ತಿದ್ದಾರೆ. ಆಮೇಲೆ ಮಾತನಾಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಈಶ್ವರಪ್ಪ ಅವರು, ಅವರೆಲ್ಲಾ ಬರುವವರಿಗೂ ನೀವು ಬೈಸಿಕೊಳ್ಳಿ. ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರಗಿನ ಜನರಿಗೆ ತಿಳಿಯಲಿ. ವಿರೋಧ ಪಕ್ಷದವರೇ ಸದನಕ್ಕೆ ಬಂದು ಕುಳಿತಿದ್ದಾರೆ. ಸ್ಪೀಕರ್ ಕೂಡ ಬಂದಿದ್ದಾರೆ. ಆದ್ರೆ ಆಡಳಿತ ಪಕ್ಷದವರು ಇನ್ನೂ ಬಂದಿಲ್ಲ ಎಂದು ಹೇಳಿ ತಿರುಗೇಟು ಕೊಟ್ಟರು.