ಮುಂಬೈ: ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಭಾರತಕ್ಕೆ ಮರಳಿದ್ದಾರೆ.
ಸೋನಾಲಿ 4 ತಿಂಗಳು ಕ್ಯಾನ್ಸರ್ ನಿಂದ ಹೋರಾಡಿ ಈಗ ಭಾನುವಾರ ರಾತ್ರಿ ಭಾರತಕ್ಕೆ ಬಂದು ಮುಂಬೈನಲ್ಲಿ ಇಳಿದರು. ಸೋನಾಲಿ ಜೊತೆ ಅವರ ಪತಿ ಗೋಲ್ದಿ ಬೆಹಲ್ ಕೂಡ ಇದ್ದರು.
ಈ ವೇಳೆ ಸೋನಾಲಿ ಮಾಧ್ಯಮದವರನ್ನು ನೋಡಿದ ತಕ್ಷಣ ಕೈ ಮುಗಿದು ನಮಸ್ಕಾರ ಮಾಡಿದರು. ಭಾರತಕ್ಕೆ ಬರುತ್ತಿರುವ ವಿಷಯವನ್ನು ಸೋನಾಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು.
ಪೋಸ್ಟ್ ನಲ್ಲಿ ಏನಿದೆ?
ದೂರ ಹೋದಷ್ಟು ಹೃದಯಗಳು ಹತ್ತಿರವಾಗುತ್ತದೆ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಾಗಲೂ ಆಗುತ್ತದೆ. ಈ ದೂರ ನನಗೆ ಸಾಕಷ್ಟು ಕಲಿಸಿದೆ. ನನ್ನ ಊರು ಹಾಗೂ ಮನೆಯಿಂದ ದೂರ ನ್ಯೂಯಾರ್ಕ್ ನಲ್ಲಿರುವಾಗ ನನ್ನ ಜೀವನದಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ಈಗ ನಾನು ನನ್ನ ಹೃದಯವಿರುವ ಜಾಗಕ್ಕೆ ಮರಳಿದ್ದೇನೆ. ಈ ಫೀಲಿಂಗ್ ನಾನು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಸ್ನೇಹಿತರನ್ನು ಖುಷಿಯಾಗಿ ನೋಡಲು ಕಾತುರದಿಂದ ಇದ್ದೇನೆ. ನನ್ನ ಕ್ಯಾನ್ಸರ್ ಪಯಣ ಇನ್ನೂ ಮುಗಿದಿಲ್ಲ. ಇದು ಕೇವಲ ಇಂಟರ್‌ವಲ್ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಸೋನಾಲಿ ಕೆಲವು ದಿನಗಳಿಗಾಗಿ ಮುಂಬೈಗೆ ಆಗಮಿಸಿದ್ದಾರೆ. ಮತ್ತೆ ಚಿಕಿತ್ಸೆ ಪಡೆಯಲು ಅವರು ನ್ಯೂಯಾರ್ಕ್ ಗೆ ಹೋಗುವ ಸಾಧ್ಯತೆಗಳಿವೆ. ಸೋನಾಲಿ ನಟಿ ಪ್ರಿಯಾಂಕಾ ಚೋಪ್ರಾಳ ಗೆಳತಿಯಾಗಿದ್ದು, ಡಿ.12ರಂದು ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಸೋನಾಲಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಲ್ಕು ತಿಂಗಳ ಹಿಂದೆ ತನಗೆ ಕ್ಯಾನ್ಸರ್ ಇರುವ ವಿಷಯ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಸೋನಾಲಿ ತಿಳಿಸಿದರು. ಬಳಿಕ ಚಿಕಿತ್ಸೆ ಪಡೆಯಲು ನ್ಯೂಯಾರ್ಕ್ ಗೆ ತೆರಳಿದರು. ಅಲ್ಲದೇ ತಮ್ಮ ಆರೋಗ್ಯದ ಬಗ್ಗೆ ಪ್ರತಿಯೊಂದು ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv