ಮುಂಬೈ: ಬಾಲಿವುಡ್ ಬಾದಶಾ ಶಾರೂಖ್ ಖಾನ್ ಜೊತೆ ನಟಿಸಲು ಸಾಕಷ್ಟು ನಟಿಯರು ಕಾಯುತ್ತಿರುತ್ತಾರೆ. ಆದರೆ ಈಗ ಬಾಲಿವುಡ್ ಖ್ಯಾತ ನಟಿ ಶಾರೂಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತದೆ.
ಶಾರೂಖ್ ಖಾನ್ ಈಗ ‘ಝೀರೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಜೀವನಾಧರಿತ ಸಿನಿಮಾಗಿದ್ದು, ಆ ಸಿನಿಮಾಗೆ ‘ಸೆಲ್ಯೂಟ್’ ಹೆಸರನ್ನು ಇಡಲಾಗಿದೆ. ಈ ಚಿತ್ರಕ್ಕಾಗಿ ಬೆಬೋ ಕರೀನಾ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ ಕರೀನಾಗೆ ಶಾರೂಖ್ ಜೊತೆ ನಟಿಸಲು ಆಸಕ್ತಿಯಿಲ್ಲ ಎಂದು ಹೇಳಲಾಗುತ್ತಿದೆ.
ಇತ್ತೀಚಿಗಷ್ಟೇ ‘ವೀರ್ ದಿ ವೆಡ್ಡಿಂಗ್’ ಪ್ರಚಾರದಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಖಾನ್, “ನಾನು ಈಗ ಹೊಸದನ್ನು ಮಾಡಲು ಇಷ್ಟಪಡುತ್ತೇನೆ. ಬೇರೆ ಏನಾದರೂ ಮಾಡಬೇಕು ಎನ್ನಿಸುತ್ತದೆ. ನಾನು ಈಗ ದೊಡ್ಡ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಳ್ಳುವುದ್ದಿಲ್ಲ. ನಾನು ಈಗ ಬೇರೆ ರೀತಿಯಲ್ಲೇ ಯೋಚಿಸುತ್ತಿದ್ದೇನೆ” ಎಂದು ಉತ್ತರಿಸಿದ್ದರು. ಕರೀನಾ ಅವರು ಶಾರೂಖ್ ಜೊತೆ ಸ್ಕ್ರೀನ್ ಶೇರ್ ಮಾಡದೇ ಇರುವ ವಿಚಾರ ಸೂಚ್ಯವಾಗಿ ಈ ರೀತಿ ಹೇಳಿದ್ದಾರೆ ಎನ್ನವ ಮಾತು ಈಗ ಬಾಲಿವುಡ್‍ನಲ್ಲಿ ಹರಿದಾಡುತ್ತಿದೆ.
ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಅನುಮಾನದ ಬೆನ್ನಲ್ಲೇ ಶಾರೂಖ್ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ರೈ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಹೆಸರು ಕೇಳಿಬರುತ್ತಿದೆ.
ಸದ್ಯ ಐಶ್ವರ್ಯ ಈಗ ‘ಫನೇ ಖಾನ್’ ಚಿತ್ರದಲ್ಲಿ ನಟಿಸುತ್ತಿದ್ದು, ಜೊತೆಗೆ ‘ರಾತ್ ಔರ್ ದಿನ್’ ಹಾಗೂ ‘ವೋ ಕೋನ್ ತೀ’ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳಿಂದ ಬಿಡುವು ಸಿಕ್ಕರೆ ಅವರು ಶಾರೂಖ್ ಖಾನ್ ಜೊತೆ ನಟಿಸಲು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತೊಂಡೆದೆ ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಚಿತ್ರದ ಸ್ಕ್ರಿಪ್ಟ್ ಗಳನ್ನು ನಿಧಾನವಾಗಿ ಪರಿಶೀಲಿಸಿ ಸಹಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ‘ಸಪ್ನಾ ದೀದೀ’ ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಚಿತ್ರದ ನಟ ಇರ್ಫಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ.