ಗದಗ: ಕೊರೊನಾ ವೈರಸ್ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಈ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡು ಕೆಲವರು ಮದ್ಯ ಕಳ್ಳತನಕ್ಕೆ ಮುಂದಾಗಿದ್ದಾರೆ.
ಗದಗ ತಾಲೂಕಿನ ಕಳಸಾಪೂರ ಗ್ರಾಮದ ಹೊರವಲಯದ ನಾಗಾವಿ ರಸ್ತೆಯಲ್ಲಿರುವ ಎಂಎಸ್‍ಐಎಲ್ ಮದ್ಯದಂಗಡಿಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ವಿಚಿತ್ರ ಎಂದರೆ ಖದೀಮರು ತಮಗೆ ಇಷ್ಟವಾಗಿರುವ ಬಿಯರ್, ಬ್ರ್ಯಾಂಡಿ ಸೇರಿದಂತೆ ಇತರೆ ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ದುಬಾರಿ ಬೆಲೆಯ ಮದ್ಯ ಅಂಗಡಿಯಲ್ಲಿದ್ದರೂ ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕದ್ದೊಯ್ದಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ 1.5 ಲಕ್ಷ ರೂ. ನಗದು ಅಂಗಡಿಯ ಕೌಂಟರ್ ಡ್ರಾನಲ್ಲಿದ್ದರೂ ಅದ್ಯಾವುದನ್ನೂ ಕಳ್ಳರು ಮುಟ್ಟಿಲ್ಲ. ಬಹುಶಃ ಇಷ್ಟು ದಿನ ಎಣ್ಣೆ ಸಿಗದೇ ಕಂಗಾಲಾದ ಕುಡುಕರೇ ಈ ಕೃತ್ಯವೆಸೆಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
ಡಿವೈಎಸ್‍ಪಿ ಎಸ್.ಕೆ ಪ್ರಹ್ಲಾದ್, ಗ್ರಾಮೀಣ ಪಿಎಸ್‍ಐ ಮಲ್ಲಿಕಾರ್ಜುನ್ ಕುಲಕರ್ಣಿ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಸೈನಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಮೂಲಕ ಕಳ್ಳರಿಗೆ ಬಲೆಬೀಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.