ಕೊಪ್ಪಳ: ಮಾರುವೇಷದಲ್ಲಿ ಬಂದು ದೇವರ ಹೆಸರಲ್ಲಿ ಹಣ ದೋಚುತ್ತಿದ್ದ ಖದೀಮರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ನಡೆದಿದೆ.
ಹಣೆಗೆ ಕುಂಕುಮ ಹಚ್ಚಿ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದರು. ಮೈಲಾರಲಿಂಗೇಶ್ವರ ದೇವರ ಭಕ್ತರ ವೇಷದಲ್ಲಿ ಬರುತ್ತಿದ್ದ ಖದೀಮರು, ಮನೆ ಮನೆಗೆ ಬಂದು ದೇವರ ಹೆಸರು ಹೇಳಿ ಭಂಡಾರ ಹಚ್ಚಿ ವಶೀಕರಣ ಮಾಡುತ್ತಿದ್ದರು. ಬಳಿಕ ಮಾಟ-ಮಂತ್ರದ ಮೂಲಕ ಜನರನ್ನು ವಶೀಕರಣ ಮಾಡಿ ಹಣವನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು.
Advertisement
Advertisement
ವೇಷಧಾರಿಗಳಿಗೆ ಮೋಸ ಹೋಗಿ 500 ರಿಂದ 3000 ಸಾವಿರದವರೆಗೆ ಗ್ರಾಮಸ್ಥರು ಹಣ ಕೊಟ್ಟಿದ್ದರು. ಹೀಗೆ ಜನರನ್ನು ಯಾಮಾರಿಸಿ ಯಡ್ಡೋಣಿ ಗ್ರಾಮದಲ್ಲಿ ಒಟ್ಟು 12000 ಸಾವಿರ ಹಣವನ್ನು ಮೂವರು ಕಳ್ಳರು ಲಪಟಾಯಿಸಿದ್ದರು. ವೇಷಧಾರಿಗಳ ಅಸಲಿ ಬಣ್ಣ ತಿಳಿದ ಕೆಲವರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
Advertisement
ಆಗ ಎಚ್ಚೆತ್ತುಕೊಂಡ ಜನರು ವೇಷಧಾರಿಗಳನ್ನು ಹಿಡಿದು, ತಮ್ಮ ಹಣ ವಾಪಸ್ ಪಡೆದುಕೊಂಡು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಇನ್ನೊಮ್ಮೆ ಇಂತಹ ಕೆಲಸ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.