ಸಿಸಿಟಿವಿ ಕ್ಯಾಮೆರಾಕ್ಕೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನ

Public TV
2 Min Read
atm theft

– 15 ಲಕ್ಷ ರೂ. ಕದ್ದು ಎಸ್ಕೇಪ್ ಆಗುವಾಗ್ಲೆ ತಗ್ಲಾಕೊಂಡ್ರು
– 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಒಡೆದ ಕಳ್ಳರು

ಬೆಂಗಳೂರು: ಕಳ್ಳರು ಎಟಿಎಂನ ಸಿಸಿಟಿವಿ ಕ್ಯಾಮೆರಾಗೆ ಚೂಯಿಂಗ್ ಗಮ್ ಅಂಟಿಸಿ, ಬ್ಲಾಕ್ ಸ್ಪ್ರೇ ಹೊಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬರೋಬ್ಬರಿ 15 ಲಕ್ಷ ರೂ. ಹಣ ಕದ್ದು ಪರಾರಿಯಾಗುವಷ್ಟರಲ್ಲಿ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ದೀಪಾಂಜಲಿನಗರದ ಎಸ್‍ಬಿಐ ಎಟಿಎಂನಲ್ಲಿ ಕಳ್ಳರು ಈ ಕೃತ್ಯವೆಸೆಗಿದ್ದಾರೆ. 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಮಿಷನ್ ಒಡೆದ ಕಳ್ಳರು ಅದರಲ್ಲಿದ್ದ 15 ಲಕ್ಷ ಹಣವನ್ನ ಬ್ಯಾಗ್‍ಗೆ ತುಂಬಿಕೊಂಡಿದ್ದರು. ಇನ್ನೇನು ಸ್ಥಳದಿಂದ ಹೊರಡಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ.

atm theft 3

ಭಾನುವಾರ ಮಧ್ಯರಾತ್ರಿ 1:30ರ ವೇಳೆಗೆ ಎಟಿಎಂಗೆ ಎಂಟ್ರಿ ಕೊಟ್ಟ ಕಳ್ಳರು ಹೊರಗಿದ್ದ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಚೂಯಿಂಗ್ ಗಮ್ ಅಂಟಿಸಿದರು. ಬಳಿಕ ಒಳಗಿದ್ದ ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಹೊಡೆದಿದ್ದಾರೆ. ಯಾವಾಗ ಆರೋಪಿಗಳು ಸಿಸಿಟಿವಿಗೆ ಚೂಯಿಂಗ್ ಗಮ್ ಮತ್ತು ಬ್ಲ್ಯಾಕ್ ಸ್ಪ್ರೇ ಹೊಡೆದ್ರೊ, ಚಿತ್ರಣಗಳು ಸ್ಪಷ್ಟವಾಗಿ ಗೋಚರಿಸದಿರೋದನ್ನ ಗಮನಿಸಿದ ಮುಂಬೈ ಎಸ್‍ಬಿಐ ಪ್ರಧಾನ ಕಚೇರಿ ಕಂಟ್ರೋಲ್ ರೂಮ್ ಸಿಬ್ಬಂದಿ ಕೂಡಲೇ ಮುಂಬೈನಿಂದ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಅಲರ್ಟ್ ಮೆಸೇಜ್ ರವಾನಿಸಿದರು.

atm theft 2

ತಕ್ಷ ಎಚ್ಚೆತ್ತ ಪೊಲೀಸರಿಗೆ ಯಾವ ಎಟಿಎಂ ಎಂಬ ನಿಖರ ಮಾಹಿತಿ ಇರಲಿಲ್ಲ. ಹೀಗಾಗಿ ದೀಪಾಂಜಲಿನಗರದ ಎಲ್ಲಾ ಎಸ್‍ಬಿಐ ಎಟಿಎಂಗಳನ್ನು ಪರಿಶೀಲಿಸುತ್ತ ಬಂದಿದ್ದಾರೆ. ಈ ವೇಳೆ ಶೆಟರ್ ಮುಚ್ಚಿದ್ದ ಎಂಟಿಎಂ ಒಂದರ ಒಳಗಿಂದ ಬೆಂಕಿಯ ಕಿಡಿಗಳು ಕಾಣಿಸಿದ್ದು, ಹೊರಗಿನಿಂದ ಲಾಕ್ ಮುರಿದು ಶೆಟರ್ ಓಪನ್ ಮಾಡಿದಾಗ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇಬ್ಬರು ಹೈ ಫೈ ಕಳ್ಳರನ್ನ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.

atm theft 1

ಆರೋಪಿಗಳನ್ನು ಹರ್ಷಾ ಆರೊ, ಸುರಬ್ಜಿತ್ ಎಂದು ಗುರುತಿಸಲಾಗಿದೆ. ಈ ಖತರ್ನಾಕ್ ಕಳ್ಳರು ಪಂಜಾಬ್ ಮೂಲದವರಾಗಿದ್ದು, 15 ಲಕ್ಷ ಹಣದ ಸಮೇತ ರೆಡ್ ಹ್ಯಾಂಡಾಗಿ ಕಳ್ಳರನ್ನ ಪೊಲೀಸರು ಹಿಡಿದಿದ್ದಾರೆ. ಬೆಂಗಳೂರಿನ ಎರಡು ಮೂರು ಎಟಿಎಂಗಳ ಕಳ್ಳತನದಲ್ಲೂ ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಯನ್ನು ಬ್ಯಾಟರಾಯನಪುರ ಪೊಲೀಸರು ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *