ರಾಯಪುರ: ಸಮಯಕ್ಕೆ ಸರಿಯಾಗಿ ಅಡುಗೆ ಮಾಡಲಿಲ್ಲವೆಂಬ ಕಾರಣಕ್ಕೆ ಸ್ವತಃ ಪೋಷಕರೇ 12 ವರ್ಷದ ಮಗಳನ್ನು ಕೊಂದು ಮೃತದೇಹವನ್ನು ಕಾಡಿನಲ್ಲಿ ಎಸೆದಿದ್ದ ಘಟನೆ ಛತ್ತಿಸ್‌ಗಢದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ತಂದೆ ವಿಶ್ವನಾಥ್ ಎಕ್ಕಾ ಮತ್ತು ಅವರ ಪತ್ನಿ ದಿಲ್ಸಾ ಎಕ್ಕಾ ಇಬ್ಬರನ್ನು ಬಂಧಿಸಲಾಗಿದೆ. ಈ ವರ್ಷ ಜೂನ್ ನಲ್ಲಿ ಘಟನೆ ನಡೆದಿತ್ತು. ಕೃತ್ಯ ಎಸಗಿದ್ದ ಪೋಷಕರು ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಮಗಳನ್ನು ತಾವೇ ಕೊಂದು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಅಂಡರ್ ಪಾಸ್‍ನಲ್ಲಿ ಸಿಲುಕಿದ ಕಾಲೇಜ್ ಬಸ್- ವಿದ್ಯಾರ್ಥಿಗಳ ರಕ್ಷಣೆ
ಕೃತ್ಯ ನಡೆದಿದ್ದು ಹೇಗೆ?
2022ರ ಜೂನ್ 28ರಂದು 12 ವರ್ಷದ ತಮ್ಮ ಮಗಳು ಸಮಯಕ್ಕೆ ಸರಿತಯಾಗಿ ಅಡುಗೆ ಮಾಡಲಿಲ್ಲ ಹಾಗೂ ದನಕರುಗಳಿಗೆ ಮೇವು ಹಾಕಿರಲಿಲ್ಲ. ಇದರಿಂದ ಕೋಪಗೊಂಡ ಬಾಲಕಿ ತಂದೆ ದೊಣ್ಣೆಯಿಂದ ಥಳಿಸಿದ್ದಾನೆ. ನೆಲದ ಮೇಲೆ ಬಿದ್ದು ಒದ್ದಾಡುತ್ತಲೇ ಹುಡುಗೆ ಪ್ರಾಣ ಬಿಟ್ಟಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ತಾಯಿ ಕೂಡ ಇದ್ದರು. ಬಳಿಕ ಇಬ್ಬರೂ ಸೇರಿ ಮಗಳ ಮೃತದೇಹವನ್ನು ಇಲ್ಲಿನ ಸುರ್ಗುಜಾ ಜಿಲ್ಲೆಯ ಕಾಡಿನಲ್ಲಿ ಎಸೆದಿದ್ದಾರೆ. ನಂತರ ಯಾರಿಗೂ ಅನುಮಾನ ಬಾರದಂತೆ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ.
ಇದೇ ತಿಂಗಳ ಆಗಸ್ಟ್ 26ರಂದು ಹುಡುಗಿಯ ತಂದೆಯೇ ತಮ್ಮ ಮಗಳ ದೇಹವು ಕೊಳೆತ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಮಗಳ ಬಟ್ಟೆ ಹಾಗೂ ಚಪ್ಪಲಿಯನ್ನೂ ಗುರುತಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಗೆ ಒಳಪಡಿಸಿದಾಗ ತಾವೇ ಕೊಲೆ ಮಾಡಿರುವುದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲೂ ಜೆಡಿಯು ಬಿಜೆಪಿಯೊಂದಿಗಿನ ಮೈತ್ರಿ ವಾಪಸ್?
ಘಟನೆ ಜೂನ್‌ನಲ್ಲಿ ನಡೆದಿತ್ತು. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ನಿನ್ನೆ ಸಂಜೆ ಆರೋಪಿ ಪೋಷಕರನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಗಳನ್ನು ಮರೆಮಾಚುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.