ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

Public TV
2 Min Read
Russia Ukraine War 3 1

ನವದೆಹಲಿ: ಜಾಗತಿಕವಾಗಿ ನಿರ್ಬಂಧಗಳಿಗೆ ಒಳಗಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಹೆಚ್ಚಿನ ನಿರ್ಬಂಧಕ್ಕೊಳಗಾದ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ. ಉಕ್ರೇನ್‌ ಮೇಲೆ ಯುದ್ಧ ಸಾರಿದ ನಂತರ ಜಾಗತಿಕವಾಗಿ ನಿರ್ಬಂಧಕ್ಕೊಳಗಾದ ರಾಷ್ಟ್ರಗಳಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ.

ಕ್ಯಾಸ್ಟಲಮ್‌.ಎಐ (Castellum.ai) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಮೆರಿಕ ಮತ್ತು ಯೂರೋಪ್‌ ಒಕ್ಕೂಟ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವಾರು ನಿರ್ಬಂಧಗಳನ್ನು ವಿಧಿಸಿವೆ. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

america flag

ದಿನ ಕಳೆದಂತೆ ರಷ್ಯಾ ಮೇಲಿನ ನಿರ್ಬಂಧಗಳ ಒತ್ತಡ ಮತ್ತಷ್ಟು ಹೆಚ್ಚಾಗುತ್ತಿದೆ. ರಷ್ಯಾ ಮೇಲೆ ಹೊಸದಾಗಿ 2,778 ನಿರ್ಬಂಧಗಳನ್ನು ವಿಧಿಸಲಾಗಿದ್ದು, ಈ ಸಂಖ್ಯೆ 5,530ಕ್ಕೆ ಏರಿಕೆಯಾಗಿದೆ. ನೆಟ್‌ಫ್ಲಿಕ್ಸ್‌ ಮತ್ತು ಅಮೆರಿಕ ಎಕ್ಸ್‌ಪ್ರೆಸ್‌ ಸೇರಿದಂತೆ ಅಮೆರಿಕದ ಅನೇಕ ಕಂಪನಿಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ.

ಜಾಗತಿಕ ನಿರ್ಬಂಧಕ್ಕೆ ಒಳಗಾಗಿರುವ ದೇಶಗಳ ಪಟ್ಟಿ ಹೀಗಿದೆ
ರಷ್ಯಾ
Castellum.ai ಪ್ರಕಾರ ಫೆ.22ಕ್ಕೂ ಮುಂಚೆ ರಷ್ಯಾ ಮೇಲೆ 2,754 ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿದ ನಂತರ ದೇಶದ ಮೇಲೆ ಹೊಸದಾಗಿ 2,778 ನಿರ್ಬಂಧಗಳನ್ನು ಜಾಗತಿಕ ಮಟ್ಟದಲ್ಲಿ ವಿಧಿಸಲಾಗಿದೆ.

Russia Ukraine War 1 1

ಇರಾನ್
ಕ್ಯಾಸ್ಟಲಮ್‌.ಎಐ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಜಾಗತಿಕ ನಿರ್ಬಂಧಗಳಲ್ಲಿ ಇರಾನ್‌ ಎರಡನೇ ಸ್ಥಾನದಲ್ಲಿದೆ. ಈ ದೇಶದ ವಿರುದ್ಧ 3,616 ನಿರ್ಬಂಧಗಳನ್ನು ಹೇರಲಾಗಿದೆ. ಪರಮಾಣು ಕಾರ್ಯಚಟುವಟಿಕೆ ಹಾಗೂ ಭಯೋತ್ಪಾದನೆಗೆ ಸಹಕಾರ ನೀಡಿದ ಆರೋಪದ ಮೇಲೆ ಈ ನಿರ್ಬಂಧಗಳನ್ನು ಹಾಕಲಾಗಿದೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

ಸಿರಿಯಾ
ಅಂತರ್ಯುದ್ಧದ ಕಾರಣಕ್ಕಾಗಿ ಯೂರೋಪ್‌ ಒಕ್ಕೂಟ, ಯುನೈಟೆಡ್‌ ಸ್ಟೇಟ್ಸ್‌, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್‌ ದೇಶಗಳು ಸಿರಿಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹಾಕಿವೆ. 2011ರ ನಂತರ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಸಿರಿಯಾ ವಿರುದ್ಧ 2,608 ನಿರ್ಬಂಧಗಳಿವೆ.

RUSSIA UKRANE WAR 4

ಉತ್ತರ ಕೊರಿಯಾ
ಪರಮಾಣು ಮತ್ತು ಬ್ಯಾಲಿಸ್ಟಿಕ್‌ ಕ್ಷಿಪಣಿ ಕಾರ್ಯಾಚರಣೆಗಳಿಗಾಗಿ ಉತ್ತರ ಕೊರಿಯಾ ಮೇಲೆ 2006ರಿಂದ ಯೂರೋಪ್‌ ಒಕ್ಕೂಟ ಅನೇಕ ನಿರ್ಬಂಧಗಳನ್ನು ವಿಧಿಸಿದೆ. 2,077 ನಿರ್ಬಂಧಗಳು ಈ ದೇಶದ ಮೇಲಿದೆ.

ವೆನಿಜುವೆಲಾ
ಕ್ಯಾಸ್ಟಲಮ್‌.ಎಐ ಪ್ರಕಾರ, ದಕ್ಷಿಣ ಅಮೆರಿಕ ದೇಶವಾದ ವೆನಿಜುವೆಲಾ ವಿರುದ್ಧ 651 ನಿರ್ಬಂಧಗಳನ್ನು ವಿಧಿಸಲಾಗಿದೆ. ಮಡುರೊ ಆಡಳಿತಕ್ಕೆ ಸಂಬಂಧಿಸಿದ ವ್ಯವಹಾರಗಳು ಮತ್ತು ತೈಲ ಘಟಕಗಳ ಮೇಲೆ 2017ರಿಂದ ಈವರೆಗೂ ಅಮೆರಿಕ ಈ ನಿರ್ಬಂಧಗಳನ್ನು ಹೇರಿದೆ.

vladimir putin russia ukraine

ಮ್ಯಾನ್ಮಾರ್
ಈ ದೇಶ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಿಲಿಟರಿ ದಂಗೆಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಿಂದ ನಿರ್ಬಂಧಗಳನ್ನು ಎದುರಿಸಿದೆ. ಮ್ಯಾನ್ಮಾರ್ ವಿರುದ್ಧ 510 ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

ಕ್ಯೂಬಾ
208 ನಿರ್ಬಂಧಗಳನ್ನು ಹೊಂದಿರುವ ಕ್ಯೂಬಾ, ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕ್ಯೂಬಾ 60 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕ ನಿರ್ಬಂಧಗಳ ಅಡಿಯಲ್ಲಿದೆ. ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು ಕ್ಯೂಬಾವನ್ನು ಪ್ರಜಾಪ್ರಭುತ್ವೀಕರಣದ ಕಡೆಗೆ ಮತ್ತು ಮಾನವ ಹಕ್ಕುಗಳಿಗೆ ಹೆಚ್ಚಿನ ಗೌರವವನ್ನು ನೀಡುವವರೆಗೆ ನಿರ್ಬಂಧ ಹಾಕುತ್ತೇವೆ ಎಂದಿದ್ದರು. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

Share This Article
Leave a Comment

Leave a Reply

Your email address will not be published. Required fields are marked *