ಮುಂಬೈ: ಬಹು ನಿರೀಕ್ಷೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12 ಆವೃತ್ತಿಗೆ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದು, ಆದರೆ ಈ ಬಾರಿ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿಸಿ ಆ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡಲು ತೀರ್ಮಾನ ಮಾಡಲಾಗಿದೆ.
ಟೂರ್ನಿಯ ಆರಂಭದ ಪಂದ್ಯದಲ್ಲೇ ಚೆನ್ನೈ ಹಾಗೂ ಆರ್‍ಸಿಬಿ ತಂಡಗಳು ಮುಖಾಮುಖಿ ಆಗಲಿದ್ದು, ಇದಕ್ಕೂ ಮುನ್ನ ನಡೆಯಬೇಕಿದ್ದ ಸಮಾರಂಭ ರದ್ದಾಗಿದೆ. ಈ ಕುರಿತು ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಮಾಹಿತಿ ನೀಡಿದ್ದು, ಯೋಧರ ಕುಟುಂಬಗಳಿಗೆ ನೀಡುವ ಮೂಲಕ ಹಣವನ್ನು ಸದುಪಯೋಗ ಮಾಡುವ ನಿರ್ಧಾರ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಟೂರ್ನಿ ಆರಂಭ ಆಗುವುದಕ್ಕೆ 30 ದಿನಗಳು ಮಾತ್ರ ಬಾಕಿ ಇದ್ದು, ಪಾಕಿಸ್ತಾನದೊಂದಿಗೆ ವಿಶ್ವಕಪ್ ಪಂದ್ಯ ಆಡಬೇಕಾ ಬೇಡವಾ ಎಂಬುವುದರ ನಡುವೇ ಯೋಧರ ನೆರವಿಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2018ರ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಬಿಸಿಸಿಐ 20 ಕೋಟಿ ರೂ. ಹಣವನ್ನು ಮೀಸಲಿಟ್ಟಿತ್ತು.
ಕೆಳ ದಿನಗಳ ಹಿಂದೆ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಮಾರ್ಚ್ 23 ರಂದು ಮೊದಲ ಪಂದ್ಯ ನಡೆಯಲಿದೆ. ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಮುಂದಿನ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಬಿಡುಗಡೆ ಆಗಿರುವ ವೇಳಾಪಟ್ಟಿಯ ಅನ್ವಯ 17 ಪಂದ್ಯಗಳ ದಿನಾಂಕ ನಿಗದಿ ಆಗಿದ್ದು, ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೂ ಪಂದ್ಯಗಳು ನಡೆಯಲಿದೆ. ಮಾರ್ಚ್ 24, 30 ಮತ್ತು 31 ರಂದು ಎರಡು ಪಂದ್ಯಗಳು ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv