– ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳೇ ಇವರ ಟಾರ್ಗೆಟ್ ಅಂತ ಆರೋಪ
ಉಡುಪಿ: ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B.L.Santosh) ಆರೋಪಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣ ಸಂಬಂಧ ಬಿ.ಎಲ್.ಸಂತೋಷ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಬಿಜೆಪಿ ಕಚೇರಿಯ ಶಿಲಾನ್ಯಾಸದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಮೂರು ವರ್ಷದ ಹಿಂದೆ ಉಡುಪಿ ಕೃಷ್ಣಮಠದ ಮೇಲೂ ಆಕ್ರಮಣ ನಡೆದಿತ್ತು. ಸ್ವಲ್ಪ ದಿನದಲ್ಲಿ ಮೂಡುಬಿದ್ರೆ ಮೇಲೆ ಆಕ್ರಮಣ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಹಲವರಿಗೆ SIT ಬುಲಾವ್ – ಯೂಟ್ಯೂಬರ್‌ಗಳಿಗೂ ನೋಟಿಸ್ ನೀಡಿ ವಿಚಾರಣೆ
ಹುಲಿಗೆ ರಕ್ತದ ರುಚಿ ಸಿಕ್ಕಿದೆ. ವೈಚಾರಿಕ ರಾಜಕೀಯದ ಮೂಲಕ ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಶ ಆಶ್ರಮ, ಶನಿ ಸಿಂಗಾಪುರದಲ್ಲೂ ರಕ್ತದ ರುಚಿ ನೋಡಿದ್ದರು. ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಲೇ ಇದ್ದಾರೆ. ನಡೆದಿರುವ ಆಕ್ರಮಣಕ್ಕೆ ಶಿಕ್ಷೆ ಆಗಬೇಕು. ಮಾಡುತ್ತಿರುವ ಅಪಪ್ರಚಾರಕ್ಕೂ ಶಾಸ್ತಿ ಆಗಬೇಕು. ಈ ಸಂಕಲ್ಪವನ್ನ ನಾವು ನಮ್ಮ ಕಾರ್ಯಾಲಯದಲ್ಲಿ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.
ಇದು ವ್ಯಕ್ತಿ ಅಥವಾ ಸಂಸ್ಥೆಗೆ ನಡೆದ ಆಕ್ರಮಣ ಅಲ್ಲ. ನಮ್ಮ ಶ್ರದ್ಧೆ, ನಂಬಿಕೆ, ವಿಷಯದ ಮೇಲೆ ಮಾಡಿರುವ ಅಕ್ರಮಣ ಇದು. ಉಡುಪಿ ಮೇಲೆ ಆಕ್ರಮಣ ಯಾಕೋ ಈಗ ಬಿಟ್ಟು ಬಿಟ್ಟಿದ್ದಾರೆ. ಮತ್ತೆ ಆಕ್ರಮಣ ಪಿಕ್‌ಅಪ್ ಮಾಡ್ತಾರೋ ಗೊತ್ತಿಲ್ಲ. ಹಿಂದುಗಳ ಶ್ರದ್ಧೆಯ ವಿಚಾರ ಮತ್ತು ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳು ಇವರ ಟಾರ್ಗೆಟ್ ಎಂದು ಅಸಮಧಾನ ಹೊರಹಾಕಿದ್ದಾರೆ.
ಕುಂಭಮೇಳದ ಮೇಲೆ ನಿರಂತರ ಅಪಪ್ರಚಾರ ನಡೆಯಿತು. ಕುಂಭಮೇಳಕ್ಕೆ ಹೋದರೆ ಜಗತ್ತಲ್ಲಿ ಇಲ್ಲದ ಕಾಯಿಲೆ ಬರುತ್ತದೆ ಅಂತ ಹೇಳಿದ್ರು. ಆದರೆ, ದೇಶದ ನಂಬಿಕೆ ಬಹಳ ಗಟ್ಟಿಯಾಗಿದೆ. ಆರೋಪ ಬಂದ ಮೇಲೆ ಕೋಟ್ಯಂತರ ಭಕ್ತರ ಸಂಖ್ಯೆ ಜಾಸ್ತಿ ಆಯ್ತು. ನಾವು ಸವಾಲನ್ನು ಎದುರಿಸುತ್ತೇವೆ. ನಮ್ಮ ಸಮಾಜ ಸಶಕ್ತವಾಗಿದೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡುತ್ತೇವೆ ಎಂದಿದ್ದಾರೆ.