ರಾಮನಗರ: ಬೆಂಗಳೂರಿನಲ್ಲಿ (Bengaluru) ನೀರಿನ ದರ ಏರಿಕೆ ವಿಚಾರ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನ ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಸಮರ್ಥಿಸಿಕೊಂಡರು.
ನೀರಿನ ದರ ಏರಿಕೆ (Bengaluru Water Tariff) ಮಾಡಿ 9 ರಿಂದ 10 ವರ್ಷ ಆಯ್ತು. ಕಳೆದ 10 ವರ್ಷದಿಂದ ಎಲೆಕ್ಟ್ರಿಕ್ ಬಿಲ್ ಎಷ್ಟಾಗಿದೆ? ತೊರೆಕಡಾನಹಳ್ಳಿಯಿಂದ ಕುಡಿಯುವ ನೀರು ಪಂಪ್ ಮಾಡಬೇಕು. ಅದಕ್ಕೆ ವಿದ್ಯುತ್ ಬಿಲ್ ಕಟ್ಟಬೇಕಲ್ವಾ? ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 10 ವರ್ಷದ ಹಿಂದೆ ಸಂಬಳ ಎಷ್ಟಿತ್ತು, ಈಗ ಎಷ್ಟಾಗಿದೆ? ಜೊತೆಗೆ ಹೊಸಹೊಸ ಯೋಜನೆಗಳನ್ನೂ ಮಾಡಬೇಕು. ಹಾಗಾಗಿ ಈಗ ದರ ಏರಿಕೆ ಪ್ರಸ್ತಾವನೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಎಂಬಿ ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ – ರಾಜ್ಯಪಾಲರಿಗೆ ದೂರು ಸಲ್ಲಿಕೆ
ಬಿಜೆಪಿಯವರು ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡ್ತಾರೆ. ಅವರೂ ಕೆಲಸ ಮಾಡಲ್ಲ, ಮಾಡುವವರಿಗೂ ಬಿಡಲ್ಲ ಎಂದು ಟಾಂಗ್ ಕೊಟ್ಟರು. ಬೆಂಗಳೂರು ಜನರಿಗೆ ಉಪಕಾರ ಸ್ಮರಣೆ ಇಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ನಾನು ಕೆಲ ಪತ್ರಿಕೆಗಳನ್ನ ನೋಡಿದೆ. ಅದರಲ್ಲಿ ಆ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಅಂತಾ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ, ಡಿಸಿಎಂ ದೆಹಲಿ ಪ್ರವಾಸ ವಿಚಾರ ಕುರಿತು ಮಾತನಾಡಿ, ದೆಹಲಿ ನಮ್ಮ ರಾಜಧಾನಿ. ಪ್ರಧಾನಿಗಳು, ರಾಷ್ಟಪತಿಗಳು ಇರೋದು ಅಲ್ಲೇ. ಹಾಗಾಗಿ ಸಿಎಂ, ಡಿಸಿಎಂ ಹೋಗ್ತಿರ್ತಾರೆ, ಬರ್ತಿರ್ತಾರೆ. ನಮ್ಮ ಸರ್ಕಾರ ಬೀಳಿಸಲು ಎರಡೂ ಪಕ್ಷಗಳು ಮುಂದಾಗಿವೆ. ಬಿಜೆಪಿಯವರು ಜಾರ್ಖಂಡ್, ದೆಹಲಿ ಸರ್ಕಾರ ಬೀಳಿಸೋಕೆ ನೋಡಿದ್ರು. ಮಹಾರಾಷ್ಟ್ರ ಸರ್ಕಾರ ಬೀಳಿಸಿದ್ರು. ಮಧ್ಯಪ್ರದೇಶ ಸರ್ಕಾರ ಬೀಳಿಸಿದ್ರು. ಅವರಿಗೆ ಅದೇ ಕೆಲಸ. 450 ವಿಪಕ್ಷಗಳ ಶಾಸಕರನ್ನ ಅವರ ಪಕ್ಷಕ್ಕೆ ಸೇರಿಸಿಕೊಂಡರು. ಇವರು ಪ್ರಜಾಪ್ರಭುತ್ವಕ್ಕೆ ಮಾರಕ. ಇವರೆಲ್ಲ ಕುತಂತ್ರಿಗಳು, ಸರ್ಕಾರ ಬೀಳಿಸಲು ಕುತಂತ್ರ ಮಾಡ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವೆ: ಡಿಸಿಎಂ ಟಾಂಗ್