– ಬಿತ್ತನೆ ಬೀಜ ಬೆಳೆ ಸರಬರಾಜು ಮಾಡುವಾಗ ಅಧಿಕಾರಿಗಳಿಂದ ಪಾಸ್ ಪಡೆಯಿರಿ
ಹುಬ್ಬಳ್ಳಿ: ಮಹಾಮಾರಿ ಕೊರೊನಾದಿಂದ ಇಡೀ ಜಗತ್ತೇ ತಲ್ಲಣಗೊಂಡಿದ್ದು, ಇಂತಹ ಸಂದರ್ಭದಲ್ಲಿ ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತನಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದಾಗಿ ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ರೈತರು ಬೆಳೆದಂತಹ ಬೆಳೆಗಳನ್ನು ಕೊಯ್ಲು ಮಾಡಲು, ಮಾರಾಟ ಮಾಡಲು ಯಾವುದೇ ನಿರ್ಬಂಧನೆಗಳು ಇರುವುದಿಲ್ಲ. ಮಾನ್ಸೂನ್ ಪ್ರಾರಂಭವಾದಲ್ಲಿ ರೈತ ಹೊಲದಲ್ಲಿ ಬಿತ್ತನೆ ಮಾಡಲು, ಸರ್ಕಾರ ರೈತನಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಒದಗಿಸಲು ಕ್ರಮಗಳನ್ನು ಕೈಗೊಂಡಿದೆ. ಬೆಳೆಗಳನ್ನು ಸಾಗಾಣಿಕೆ ಮಾಡಲು ಎಸೆನ್ಷಿಯಲ್ ಕಮಾಂಡಿಟಿಸ್ ಆ್ಯಕ್ಟ್(ಅಗತ್ಯ ವಸ್ತುಗಳ ಕಾಯ್ದೆ) ಅಡಿ ತಂದಿದ್ದು, ಈ ಸಂಬಂಧ ರಾಜ್ಯದ ಎಲ್ಲಾ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರಿಗೆ ಹಾಗೂ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಇತರೆ ಭಾಗಗಳಲ್ಲಿ ಭತ್ತ ಬೆಳೆದ ರೈತರು ಕೊಯ್ಲಿಗೆ ಪರರಾಜ್ಯದಿಂದ ಕೊಯ್ಲುಯಂತ್ರ ತರಬೇಕಾಗುತ್ತದೆ ಎಂಬ ಆತಂಕದಲ್ಲಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದು ಬೇಡ. ಬಿತ್ತನೆ ಮಾಡಲಾಗಲೀ ಅಥವಾ ಕೊಯ್ಲು ಮಾಡಲಾಗಲಿ ರೈತರಿಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
Advertisement
Advertisement
ಹೀಗಾಗಿ ರೈತರು ಯಾವುದೇ ಆತಂಕಕ್ಕೊಳಗಾಗದೇ ತಮ್ಮ ಬಿತ್ತನೆ ಕಾರ್ಯ ಕೃಷಿ ಕಾರ್ಯದಲ್ಲಿ ತೊಡಗಬಹುದು. ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಯಾರೂ ತೊಂದರೆ ಮಾಡಬಾರದು. ಯಂತ್ರೋಪಕರಣ ತಂದು ಕೊಯ್ಲು ಕೃಷಿ ಚಟುವಟಿಕೆ ಮಾಡುವ ಮುನ್ನ ರೈತರು ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಕೃಷಿ ಚಟುವಟಿಕೆ ಮಾಡುವಾಗ ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಿತ್ತನೆ ಬೀಜ ಮತ್ತು ಫಸಲು ಸರಬರಾಜು ಮಾಡುವಾಗ ಇಲಾಖಾಧಿಕಾರಿಗಳಿಂದ ಸರಬರಾಜು ಮಾಡುವ ವಾಹನಗಳಿಗೆ ಕೃಷಿಕರು ಪಾಸ್ ಪಡೆಯಬೇಕು ಎಂದು ಬಿ.ಸಿ ಪಾಟೀಲ್ ಸೂಚಿಸಿದ್ದಾರೆ.